ಏಕಃ ಸಂಪನ್ನಮಶ್ನಾತಿ*
*ವಸ್ತೇ ವಾಸಶ್ಚ ಶೋಭನಂ ।*
*ಯೋsಸಂವಿಭಜ್ಯ ಭೃತ್ಯೇಭ್ಯಃ*
*ಕೋ ನೃಶಂಸತರಸ್ತತಃ ||*
(ಮಹಾಭಾರತ)

_“ತನ್ನ ಆಶ್ರಿತರಿಗೆ ಏನನ್ನೂ ಕೊಡದೆ ದುರ್ಲಕ್ಷಿಸಿ ಯಾರು ತಾನೊಬ್ಬನೇ ಸ್ವಾರ್ಥಾವಿಷ್ಟನಾಗಿ ಮಿಷ್ಟಾನ್ನ ಭೋಜನ ಮಾಡುತ್ತಾನೋ ಮತ್ತು ಇತರರನ್ನು ಅವಗಣಿಸಿ ತಾನು ಶ್ರೇಷ್ಠದರ್ಜೆಯ ವಸ್ತ್ರಗಳನ್ನು ಧರಿಸುತ್ತಾನೋ ಅವನಿಗಿಂತ ಪಾಪಾತ್ಮರು ಬೇರೆ ಇಲ್ಲ.”_

ತನ್ನಲ್ಲಿರುವುದನ್ನು ಇತರರಿಗೆ ಹಂಚಿ ಅನಂತರ ತಾನು ಅದನ್ನು ಅನುಭವಿಸುವುದು ಸಜ್ಜನರ ದಾರಿ ಎಂಬುದು ಸ್ವತಃಸಿದ್ಧವಾಗಿದೆ. ಇಂತಹ ಸದ್ವರ್ತನೆಗೆ ವಿಶೇಷ ಆಯಾಮವೂ ಉಂಟು. ತನ್ನಲ್ಲಿ ತನ್ನ ಆವಶ್ಯಕತೆಗೆ ಮೀರಿದಷ್ಟು ಇರುವುದರಿಂದ ಒಂದಷ್ಟನ್ನು ಬೇರೆಯವರಿಗೆ ಕೊಟ್ಟರೆ ತನಗೇನೂ ನಷ್ಟವಿಲ್ಲ ಎಂಬುದು ಅಧಮಪಕ್ಷ, ಲೋಕರೂಢಿಯಂತೆ ಸ್ವಲ್ಪಮಟ್ಟಿಗಾದರೂ ಔದಾರ್ಯವನ್ನು ಮೆರೆಯುವುದು ಮಧ್ಯಮಪಕ್ಷ. ಈ ಎರಡಕ್ಕೂ ಮೀರಿದ ಉತ್ತಮಪಕ್ಷವೆಂದರೆ ನನ್ನಲ್ಲಿರುವ ಭಗವಂತನೇ ಇತರರಲ್ಲಿಯೂ ನೆಲೆಸಿದ್ದಾನೆ ಎಂಬುದರ ಅರಿವಿನಿಂದ ಇತರರಲ್ಲಿ ವಿಶಾಲ ಮನಸ್ಸಿನಿಂದ ವ್ಯವಹರಿಸುವುದು. ಈ ದೃಷ್ಟಿಯನ್ನೇ ವೇದಾಂತದರ್ಶನದಲ್ಲಿ ‘ಆತ್ಮೌಪಮ್ಯ’ ಎಂದು ಕರೆದಿದ್ದಾರೆ.ಭಗವಾನ್ ರಮಣಮಹರ್ಷಿಗಳಲ್ಲಿ ಅತ್ಯಂತ ಪೂಜ್ಯಭಾವನೆ ತಳೆದಿದ್ದ ಬಡೌದೆಯ ಮಹಾರಾಣಿ ಒಮ್ಮೆ ಅವರಿಗೆ ಒಂದು ಬೆಳ್ಳಿಯ ತಟ್ಟೆಯನ್ನೂ ಬೆಳ್ಳಿಯ ಲೋಟವನ್ನೂ ಅರ್ಪಿಸಿ ಅವರು ಅವನ್ನು ಬಳಸಿದಲ್ಲಿ ತಾನು ಧನ್ಯಳೆಂದು ಭಾವಿಸುವುದಾಗಿ ಅರಿಕೆ ಮಾಡಿದಳು. ಆಕೆಗೆ ಮಹರ್ಷಿಗಳು ಹೇಳಿದರು: “ಆಗಬಹುದು. ಆದರೆ ಈ ಆಶ್ರಮದಲ್ಲಿ ನನ್ನೊಡನೆ ಇರುವ ಸಹಾಯಕರಿಗೆಲ್ಲ ಕೂಡಾ ತಾವು ಇಂತಹ ತಟ್ಟೆ-ಲೋಟಗಳನ್ನು ದಾನವಾಗಿ ಇತ್ತಲ್ಲಿ ನಾನು ಅವನ್ನು ಬಳಸಲು ಅಭ್ಯಂತರವಿಲ್ಲ. ನಾನು ಮಾತ್ರ ದೊಡ್ಡವನೆಂದೂ ಉಳಿದವರು ಸಣ್ಣವರೆಂದೂ ಯಾರೂ ಭಾವಿಸಬಾರದು. ನಮ್ಮೆಲ್ಲರಲ್ಲಿ ಇರುವ ಪರಮಾತ್ಮ ಒಬ್ಬನೇ.”ತಿರುಪತಿಯ ಬಳಿ ಏರ್ಪೇಡು ಎಂಬಲ್ಲಿ ವ್ಯಾಸಾಶ್ರಮವೆಂಬ ಪ್ರಸಿದ್ಧ ಅಧ್ಯಾತ್ಮಕೇಂದ್ರವಿದೆ. ಅದನ್ನು ಸ್ಥಾಪಿಸಿದವರು ಮಲಯಾಳಸ್ವಾಮಿಗಳೆಂಬ ಮಹಾಪುರುಷರು. ಅಲ್ಲಿಗೆ ಮಧ್ಯಾಹ್ನ ಯಾರೇ ಭಕ್ತರು ಬಂದರೂ ಅವರಿಗೆಲ್ಲ ಆಶ್ರಮವಾಸಿ ವಿದ್ಯಾರ್ಥಿಗಳೊಡನೆ ಭೋಜನ ನಡೆಯುತ್ತಿತ್ತು. ಆ ದಿನಗಳಲ್ಲಿ ಊಟದಲ್ಲಿ ತುಪ್ಪವನ್ನು ಕಡ್ಡಾಯವಾಗಿ ನಿರೀಕ್ಷಿಸುವ ಜನಸಮುದಾಯ ಇದ್ದಿತು. ಒಮ್ಮೆ ಆಶ್ರಮದ ವಿದ್ಯಾರ್ಥಿಗಳಿಗೆ ಊಟದಲ್ಲಿ ತುಪ್ಪವನ್ನು ಬಡಿಸದೆ ಇದ್ದುದನ್ನು ಸ್ವಾಮಿಗಳು ಗಮನಿಸಿದರು. ಅವರು ಕೂಡಲೇ ಪಾರುಪತ್ತೆದಾರರನ್ನು ಕರೆಯಿಸಿ ವಿಚಾರಿಸಿದರು. ಆಶ್ರಮಕ್ಕೆ ಎಲ್ಲ ದಿನಸಿಗಳೂ ಭಕ್ತರಿಂದ ದಾನವಾಗಿ ಬರುತ್ತಿದ್ದವು. ಕೆಲವು ದಿನಗಳಿಂದ ಅದೇಕೋ ತುಪ್ಪ ಬಾರದಿದ್ದುದರಿಂದ ಅಡುಗೆಯವರು ಇದ್ದ ಅಲ್ಪ ತುಪ್ಪವನ್ನು ಅತಿಥಿಗಳಿಗೆ ಮಾತ್ರ ಬಡಿಸುತ್ತಿದ್ದರು. ಹೀಗೆ ಮೂರು ದಿನ ಕಳೆದಿತ್ತು. ಸ್ವಾಮಿಗಳು “ವಿದ್ಯಾರ್ಥಿಗಳಿಗೆ ಬಡಿಸದೆ ಉಳಿದವರಿಗೆ ಮಾತ್ರ ಬಡಿಸುವುದು ಪಕ್ಷಪಾತವಾಗುತ್ತದೆ. ಕೂಡಲೇ ಪಕ್ಕದ ಊರಿನಿಂದ ತುಪ್ಪವನ್ನು ಹಣಕೊಟ್ಟು ತನ್ನಿರಿ. ವಿದ್ಯಾರ್ಥಿಗಳಿಗೆ ತುಪ್ಪ ಬಡಿಸುವವರೆಗೆ ನನಗೂ ಬೇರಾರಿಗೂ ಬಡಿಸಬೇಡಿರಿ” ಎಂದು ಆಜ್ಞೆ ಮಾಡಿದರು. ಈಗಾಗಲೇ ನಡೆದಿದ್ದ ಅಚಾತುರ್ಯಕ್ಕೆ ಪ್ರಾಯಶ್ಚಿತ್ತವಾಗಿ ಸ್ವಾಮಿಗಳು ಮೂರು ದಿವಸ ಉಪವಾಸವನ್ನಾಚರಿಸಿ ನಾಲ್ಕನೆಯ ದಿನವಷ್ಟೆ ಭೋಜನವನ್ನು ಸ್ವೀಕರಿಸಿದರು.ಎಲ್ಲ ಪ್ರಾಣಿಗಳ ಸುಖದುಃಖಗಳೂ ತನ್ನವೇ ಎಂಬ ಮನಃಸ್ಥಿತಿಯುಳ್ಳವನನ್ನು ‘ಯೋಗಯುಕ್ತ’, ‘ವಿಶುದ್ಧಾತ್ಮ’ ಎಂದು ಕರೆದಿದೆ ಭಗವದ್ಗೀತೆ.(ಉತ್ಥಾನ – 2013)*🌷🌺🙏ಶುಭದಿನವಾಗಲಿ!🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ ಬೆಂಗಳೂರು.