- ನ. 26 ರಿಂದ ಧಾರ್ಮಿಕ ಕಾರ್ಯಕ್ರಮ ಕ್ಕೆ ಚಾಲನೆ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ನ.26ರಿಂದ 30ರ ವರೆಗೆ ಜರುಗಲಿದೆ. ಕಾರ್ತಿಕ ಮಾಸದ ಮಂಗಳ ಬಹುಳ ಏಕಾದಶಿಯಿಂದ ಅಮಾವಾಸ್ಯೆಯವರೆಗಿನ ಮಂಗಳಪರ್ವದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ನಡೆಯಲಿದೆ.

ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಮಂಜುನಾಥ ಸ್ವಾಮಿಗೆ ನ.26: ಹೊಸ ಕಟ್ಟೆ ಉತ್ಸವ,ನ.27: ಕೆರೆ ಕಟ್ಟೆ ಉತ್ಸವ,ನ.28: ಲಲಿತೋದ್ಯಾನ ಉತ್ಸವ ,ನ.29: ಕಂಚಿಮಾರು ಕಟ್ಟೆ ಉತ್ಸವ,ನ.30: ಗೌರಿಮಾರು ಕಟ್ಟೆ ಉತ್ಸವ ನಡೆಯಲಿದೆ.

ಸರ್ವಧರ್ಮ ಸಮ್ಮೇಳನ: ಅಮೃತವರ್ಷಿಣಿ ಸಭಾಭವನದಲ್ಲಿ ನ.29ರಂದು ಸಂಜೆ 5 ಗಂಟೆಯಿಂದ ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನ ನಡೆಯಲಿದ್ದು, ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಉದ್ಘಾಟಿಸುವರು. ಬೆಂಗಳೂರು ರಾಜರಾಜೇಶ್ವರೀ ನಗರದ ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಬಳಿಕ ಸಂಶೋಧಕ ಡಾ. ಜಿ.ಬಿ.ಹರೀಶ್, ಡಾ. ಜೋಸೆಫ್ ಎನ್.ಎಂ., ಮೆಹತಾಬ ಇಬ್ರಾಹಿಂ ಸಾಬ ಕಾಗವಾಡ ಅವರಿಂದ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ 8.30ರಿಂದ ಭರತನಾಟ್ಯ ನೆರವೇರಲಿದೆ.

ಸಾಂಸ್ಕೃತಿಕ ಕಾರ್ಯ ಕ್ರಮ: 8.30ರಿಂದ ಶ್ರೀ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಂಗೀತ ಸಂಜೆ ನೆರವೇರಲಿದೆ. ಪ್ರತಿದಿನ ಸಂಜೆ 6.30 ರಿಂದ ರಾತ್ರಿ 11ರವರೆಗೆ ವಸ್ತು ಪ್ರದರ್ಶನ ಮಂಟಪದಲ್ಲಿ ಹಾಗೂ ಅಮೃತವರ್ಷಿಣಿ ವೇದಿಕೆಯಲ್ಲಿ ಸಾಂಸ್ಕೃತಿಕ-ಸಂಗೀತ ಹಬ್ಬವೇ ನೆರವೇರಲಿದೆ.

ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ ನ.26ರಿಂದ ಡಿ.1ರವರೆಗೆ ಧರ್ಮಸ್ಥಳದ ಪ್ರೌಢಶಾಲಾ ವಠಾರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯಮಟ್ಟದ ವಸ್ತುಪ್ರದರ್ಶನ ನಡೆಯಲಿದ್ದು, ನ.26ರಂದು ಬೆಳಗ್ಗೆ 10.30ಕ್ಕೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಉದ್ಘಾಟಿಸಲಿರುವರು. ಕೃಷಿ, ಆರೋಗ್ಯ, ವಾಣಿಜ್ಯ, ಶಿಕ್ಷಣ, ಗ್ರಾಮೀಣ ಗುಡಿಕೈಗಾರಿಗಳಿಗೆ ಸಂಬಂಧಿಸಿದ 300 ಕ್ಕೂ ಮಿಕ್ಕಿ ಮಳಿಗೆಗಳಿರಲಿವೆ.



