
ತೀರ್ಥಹಳ್ಳಿ : ಇತ್ತೀಚೆಗೆ ಶಿವಮೊಗ್ಗದ ವಾಣಿಜ್ಯ ತೆರಿಗೆ ಇಲಾಖೆಯ ಸಿಬ್ಬಂದಿಗಳು ಅಡಿಕೆಯ ಕಳ್ಳ ವ್ಯಾಪಾರಿಗಳ ಕುಮ್ಮಕ್ಕಿನಿಂದ ಸಾಮಾನ್ಯ ರೈತರು ಎ ಪಿ ಎಂ ಸಿ ಗೆ ಸಾಗಿಸುವ ಅಡಿಕೆಯನ್ನು ತಡೆದು ಸತಾಯಿಸುವುದು, ದಂಡ ವಿಧಿಸುವುದು ಮುಂತಾದ ಕಿರುಕುಳ ನೀಡುತ್ತಿರುವ ಬಗ್ಗೆ ಫೆ.24 ರಂದು ತೀರ್ಥಹಳ್ಳಿಯಲ್ಲಿ ಸಭೆ ನಡೆಸಿ ಖಂಡಿಸಲಾಯಿತು.

ಸ್ವತಃ ಆರ್ಥಿಕ ಸಚಿವರಾಗಿರುವ ಮುಖ್ಯ ಮಂತ್ರಿಗಳು ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಬೇಕು. ಎಪಿಎಂಸಿ ಗೆ ಬೆಳೆಗಳನ್ನು ಸಾಗಿಸುವ ರೈತರಿಗೆ ಕಿರುಕುಳ ಕೊಡುವ ಮೂಲಕ ಎಪಿಎಂಸಿಗಳನ್ನೆ ಮುಚ್ಚುವ ಅಧಿಕಾರ ಶಾಹಿ ಕುತಂತ್ರದ ಒಂದು ವಿಧಾನ ಇದು. ಈ ಪಿತೂರಿಯ ಅಂಗವಾಗಿಯೇ ಶಿವಮೊಗ್ಗದ ಅತಿ ದೊಡ್ಡ ಕಳ್ಳ ವ್ಯಾಪಾರಿಗಳ ಹೆಸರು ವಿಳಾಸವೇ ಗೊತ್ತಿಲ್ಲದೆ ನಟಿಸಿ ಕೇವಲ ರೈತರ ಅಡಿಕೆ ಸಾಗಣಿಕೆಗೆ ಅಡ್ಡಿ ಮಾಡಿದ ತೆರಿಗೆ ಇಲಾಖೆಯ ಸಿಬ್ಬಂದಿಗಳನ್ನು ಈ ಕೂಡಲೇ ಅಮಾನತುಗೊಳಿಸಿ ತನಿಖೆ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇಂದಿನ ಸಭೆಯಲ್ಲಿ ಒತ್ತಾಯಿಸಲಾಯಿತು.

ಈ ವಿಷಯದಲ್ಲಿ ಸರ್ಕಾರ ತೆರಿಗೆ ಇಲಾಖೆಯ ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸದಿದ್ದಲ್ಲಿ ನಾವು ರೈತರೆ Direct Action (ನೇರ ಕ್ರಮ) ಜರುಗೀಸುತ್ತೇವೆ. ಇನ್ನು ಮುಂದೆ ತೆರಿಗೆ ಇಲಾಖೆಯವರು ರೈತರ ಅಡಿಕೆ ಸಾಗಾಣಿಕೆ ತಡೆದು ಕೀಟಲೆ ಮಾಡಿದರೆ ಸಂಬಂಧಪಟ್ಟ ಇಲಾಖಾ ಸಿಬ್ಬಂದಿಗಳ ತಲೆಯ ಮೇಲೆ ಅಡಿಕೆ ಮೂಟೆಗಳನ್ನು ಹೊರಿಸಿ ಎಪಿಎಂಸಿಯವರೆಗೆ ನಡೆಸಿಕೊಂಡು ಹೋಗುವ ಮೂಲಕ ರೈತರ ಶಕ್ತಿ ಪ್ರದರ್ಶನ ಮಾಡಲಾಗುವುದು.

ಈ ಸಂಘರ್ಷಕ್ಕೆ ಸರ್ಕಾರ ಸಿದ್ದವಿಲ್ಲವಾದರೆ ಎಪಿಎಂಸಿ ಉಳಿಸಲು ಮತ್ತು ರೈತರಿಗೆ ಕಿರುಕುಳ ಕೊಡುವ ನಿಯಮಗಳನ್ನು ಬದಲಿಯಿಸಿ ರೈತ ಸ್ನೇಹಿ ವಿಧಾನಗಳನ್ನು ಜಾರಿಗೊಳಿಸಬೇಕು. ಆ ಮೂಲಕ ಕಳ್ಳ ಮಾರ್ಗದ ವ್ಯಾಪಾರಗಳನ್ನು ಸಂಪೂರ್ಣ ನಿರ್ಭಂದಿಸಲು ರೈತರ ವಿಶ್ವಾಸ ಮತ್ತು ಸಹಕಾರವನ್ನು ಪಡೆದುಕೊಳ್ಳಬೇಕು. ಇದಕ್ಕಾಗಿ ಎಪಿಎಂಸಿ ಕಡೆಯಿಂದಲೆ ಸರಕು ಸಾಗಣೆ ವಾಹನಗಳನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕು ಮತ್ತು ಈ ವಾಹನಗಳೂ ಸೇರಿದಂತೆ ಖಾಸಗಿ ಸಾಗಾಣಿಕೆ ವಾಹನಗಳಿಗೆ ಜಿಪಿಎಸ್ ಕಡ್ಡಾಯ ಅಡವಳಿಕೆ ಮಾಡಿ ಅಡಿಕೆ ಕಳ್ಳ ಸಾಗಾಣಿಕೆ ತಡೆಯಲೇಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದು ಅಧ್ಯಕ್ಷರಾದ ಕೋಡ್ಲು ವೆಂಕಟೇಶ್ ಪ್ರಧಾನ ಕಾರ್ಯದರ್ಶಿ ಹೊರಬೈಲ್ ರಾಮಕೃಷ್ಣ ಸರ್ಕಾರಕ್ಕೆ ಒತ್ತಾಯಿಸಿದರು.


