*ಕ್ಷಂತವ್ಯೋ ಮಂದಬುದ್ಧೀನಾಂ*
*ಅಪರಾಧೋ ಮನೀಷಿಣಾ ।*
*ನ ಹಿ ಸರ್ವತ್ರ ಪಾಂಡಿತ್ಯಂ*
*ಸುಲಭಂ ಪುರುಷೇ ಕ್ವಚಿತ್ ||*
(ಸುಭಾಷಿತರತ್ನಭಾಂಡಾಗಾರ)

_“ವಿವೇಕಶೀಲರಾದವರು ಬುದ್ಧಿಶಾಲಿಗಳಲ್ಲದ ಸಾಮಾನ್ಯರು ಎಸಗಿದ ತಪ್ಪನ್ನು ಕ್ಷಮಿಸಬೇಕು. ಯುಕ್ತಾಯುಕ್ತವಿವೇಚನೆ ಎಲ್ಲರಲ್ಲಿಯೂ ಇರುತ್ತದೆಂದು ನಿರೀಕ್ಷಿಸಲಾಗದು. ಎಲ್ಲಿಯೋ ಒಂದೊಂದು ಕಡೆ ಮಾತ್ರ ಅದು ವ್ಯಕ್ತಿಗಳಲ್ಲಿ ಕಂಡೀತು.”_

ಲೌಕಿಕ ವ್ಯವಹಾರಗಳಲ್ಲಿ ಯಾರೋ ತಪ್ಪನ್ನು ಮಾಡುವುದು ವಿರಳವಲ್ಲ. ಅದು ಸ್ವಭಾವದ ಕಾರಣದಿಂದ ಇರಬಹುದು, ಹೊಣೆಗಾರಿಕೆಯ ಅಭಾವದಿಂದ ಇರಬಹುದು, ಅಥವಾ ಕ್ಷಣಿಕ ದೌರ್ಬಲ್ಯದಿಂದಲೇ ಇರಬಹುದು. ಅಂತಹ ಪ್ರಸಂಗಗಳು ನಡೆದಾಗ ಅವುಗಳ ಬಗೆಗೆ ಕ್ಷಮೆ ತೋರುವುದು ಉದಾತ್ತ ನಡೆ. ಜಗತ್ತಿನ ಎಲ್ಲ ಅಸಮತೋಲಗಳನ್ನೂ ನಾವು ನೇರ್ಪಡಿಸಬಲ್ಲೆವೆಂಬ ಧಾರ್ಷ್ಟ್ಯವು ಸಲ್ಲದೆಂಬ ತಾತ್ವಿಕತೆಯಿಂದಾಗಿಯೂ ಕ್ಷಮೆಯು ಪ್ರಶಂಸ್ಯವೆನಿಸುತ್ತದೆ. ಇದಕ್ಕಿಂತ ಮಿಗಿಲಾಗಿ ಕ್ಷಮಾಗುಣವು ವ್ಯಾವಹಾರಿಕ ಜೀವನವನ್ನು ಹೆಚ್ಚು ಸಹ್ಯವಾಗಿಸುತ್ತದೆ ಎಂಬುದನ್ನೂ ಮರೆಯಬಾರದು.

ಇದನ್ನು ನಿದರ್ಶನಪಡಿಸುವ ಘಟನೆಯೊಂದು ಸಾಹಿತ್ಯೇತಿಹಾಸದಲ್ಲಿ ಪ್ರಸಿದ್ಧವಾಗಿದೆ.

ಈಜಿಪ್ಟಿನ ಒಂದು ಅಧ್ಯಾತ್ಮ ಸಾಧನಾಕೇಂದ್ರದ ಮುಖ್ಯಸ್ಥನಾಗಿದ್ದವನು ಅನಸ್ತಾಶಿಯಾಸ್. ಆ ಕೇಂದ್ರದಲ್ಲಿ ದೊಡ್ಡ ಗ್ರಂಥಾಲಯವಿದ್ದಿತು. ಅದರಲ್ಲಿ ಬೆಲೆಕಟ್ಟಲಾಗದ ಒಂದು ಅತ್ಯಮೂಲ್ಯ ಗ್ರಂಥವೂ ಇದ್ದಿತು. ಒಮ್ಮೆ ಅಲ್ಲಿಗೆ ಭೇಟಿಯಿತ್ತ ಒಬ್ಬ ಸಾಧುವು ಚಪಲವನ್ನು ತಡೆದುಕೊಳ್ಳಲಾಗದೆ ಆ ಗ್ರಂಥವನ್ನು ಕದ್ದು ಒಯ್ದ. ಅಲ್ಪ ಸಮಯದ ನಂತರ ಗ್ರಂಥವು ಕಾಣೆಯಾಗಿದ್ದುದು ಗಮನಕ್ಕೆ ಬಂದಿತು. ಅದು ಯಾರ ಕಾರ್ಯವೆಂಬ ಬಗೆಗೆ ಸಂಶಯವಿರಲಿಲ್ಲ. ಆದರೆ ಅನಸ್ತಾಶಿಯಾಸ್ ದೂರನ್ನು ಕೊಡಲಿಲ್ಲ.

ಸಾಧುವು ಆ ವಿರಳ ಗ್ರಂಥವನ್ನು ಮಾರಲು ಒಬ್ಬ ಶ್ರೀಮಂತನಲ್ಲಿಗೆ ಹೋದ. ಶ್ರೀಮಂತನು “ಇದರ ಬೆಲೆಯನ್ನು ತಜ್ಞರಿಂದ ತಿಳಿದುಕೊಳ್ಳಬೇಕಾಗಿದೆ. ಒಂದು ದಿನದ ಮಟ್ಟಿಗೆ ಅದು ಇಲ್ಲಿಯೇ ಇರಲಿ” ಎಂದು ಹೇಳಿ ಕಳಿಸಿದ.

ಆ ಪ್ರಾಂತದಲ್ಲಿಯೇ ತುಂಬಾ ತಿಳಿವಳಿಕಸ್ತನೆಂದು ಹೆಸರಾಗಿದ್ದ ಅನಸ್ತಾಶಿಯಾಸನ ಬಳಿಗೆ ಶ್ರೀಮಂತನು ಗ್ರಂಥವನ್ನೊಯ್ದು ಅಭಿಪ್ರಾಯ ಕೇಳಿದ. ಗ್ರಂಥ ತನ್ನ ಸಂಗ್ರಹದ್ದೇ ಎಂದು ಅನಸ್ತಾಶಿಯಾಸನಿಗೆ ಕೂಡಲೇ ತಿಳಿಯಿತು. ಆದರೆ ಅದನ್ನು ಪ್ರಸ್ತಾವಿಸದೆ “ಇದು ಅಮೂಲ್ಯ ಗ್ರಂಥ. ಒಂದು ಸುವರ್ಣ ವರಹವನ್ನೋ ಇನ್ನೂ ಹೆಚ್ಚನ್ನೂ ಧಾರಾಳವಾಗಿ ಇದಕ್ಕೆ ಕೊಡಬಹುದು” ಎಂದ.

ಹಿಂದಿರುಗಿದ ಶ್ರೀಮಂತನು ಮರುದಿನ ಸಾಧುವು ಬಂದಾಗ ಅವನು ಹಿಂದಿನ ದಿನ ಕೇಳಿದ್ದ ಬೆಲೆಯನ್ನು ಕೊಡಲು ಒಪ್ಪಿದ. ಸಾಧುವು “ತಾವು ಯಾರಲ್ಲಿ ಇದರ ಬಗೆಗೆ ವಿಚಾರ ಮಾಡಿದಿರಿ?” ಎಂದು ಕೇಳಿದ.

ಶ್ರೀಮಂತನು “ಈ ವಿಷಯಗಳಲ್ಲಿ ಅನುಭವಸ್ಥರಾದ ಅನಸ್ತಾಶಿಯಾಸರಲ್ಲಿ ಕೇಳಿದೆ” ಎಂದ. ಸಾಧುವು ಬೆವೆತು “ಅವರು ಇನ್ನೇನೂ ಹೇಳಲಿಲ್ಲವೆ?” ಎಂದು ಪ್ರಶ್ನಿಸಿದ. “ಅವರು ಬೇರೆ ಏನನ್ನೂ ಹೇಳಲಿಲ್ಲ” ಎಂದ ಶ್ರೀಮಂತ.

ಆಶ್ಚರ್ಯಚಕಿತನಾದ ಸಾಧುವು ಕೆಲವು ನಿಮಿಷ ಆಲೋಚಿಸಿ “ಕ್ಷಮಿಸಿ, ಈ ಗ್ರಂಥವನ್ನು ಮಾರುವ ಇಚ್ಛೆ ನನಗೆ ಈಗ ಇಲ್ಲ” ಎಂದ. ಶ್ರೀಮಂತನು ಮೊದಲು ಒಪ್ಪಿಕೊಂಡಿದ್ದುದಕ್ಕೆ ದುಪ್ಪಟ್ಟು ಬೆಲೆಯನ್ನು ಕೊಡುವುದಾಗಿ ಹೇಳಿದ. ಅದಕ್ಕೂ ಒಪ್ಪದೆ ಸಾಧುವು ಗ್ರಂಥದೊಡನೆ ಹಿಂದಿರುಗಿದ.

ಅಲ್ಲಿಂದ ಅವನು ಅನಸ್ತಾಶಿಯಾಸನ ಬಳಿಗೆ ಹೋಗಿ ಗ್ರಂಥವನ್ನು ಮುಂದಿರಿಸಿ ಕ್ಷಮಾಪಣೆ ಕೇಳಿದ.

ಅನಸ್ತಾಶಿಯಾಸನು “ಪರವಾಗಿಲ್ಲ, ನಾನು ಈ ಗ್ರಂಥವನ್ನು ನಿನಗೆ ಉಡುಗೊರೆಯಾಗಿ ಕೊಡಲು ತೀರ್ಮಾನಿಸಿದ್ದೇನೆ” ಎಂದ.

ಸಾಧುವು “ನನಗೆ ಇದು ಬೇಡ. ಬದಲಾಗಿ ಇಲ್ಲಿಯೇ ನಿಮ್ಮ ಶಿಷ್ಯನಾಗಿರಲು ಅನುಮತಿ ನೀಡಿ” ಎಂದು ಪ್ರಾರ್ಥಿಸಿದ.

ಅದರಂತೆ ಸಾಧುವು ತನ್ನ ಶೇಷಾಯುಷ್ಯವನ್ನು ಆ ಸಾಧನಾಕೇಂದ್ರದಲ್ಲಿ ಕಳೆದ.

(ಉತ್ಥಾನ – 2013)

*🌷🌺🙏ಶುಭದಿನವಾಗಲಿ!🙏🌺🌷*

ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್
ಬೆಂಗಳೂರು

Leave a Reply

Your email address will not be published. Required fields are marked *