– ಜಿಂಕೆ, ಕಾಡುಕೋಣ, ಶ್ರೀಗಂಧ,ಬಂದೂಕು ವಶ – ನಮ್ಮ ಹೆಣದ ಮೇಲೆ ಪ್ರಸನ್ನ ಭಟ್ ಅವರನ್ನು ಬಂಧಿಸಿ – ಆರಗ ಕೆಂಡಾಮಂಡಲ

ಶಿವಮೊಗ್ಗ :ಜಿಲ್ಲೆಯ ಹಣಗೆರೆ ಸಮೀಪದ ಬಸವನಗದ್ದೆ ಗ್ರಾಮದ ಪ್ರಸನ್ನಕುಮಾರ್ ಅವರ ಮನೆಯ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ಮಾಡಿದ್ದು ಮನೆಯಲ್ಲಿದ್ದ 18 ಜಿಂಕೆ ಮತ್ತು ಕಡವೆ ಕೊಂಬು, 9 ಕಾಡುಕೋಣ ಕೊಂಬು, 10 ಕೆ.ಜಿ. ಶ್ರೀಗಂಧ ಹಾಗೂ ಒಂದು ಬಂದೂಕು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಆರಗ ಜ್ಞಾನೇಂದ್ರ ಅಧಿಕಾರಿಗಳ ಮೇಲೆ ಕಿಡಿ ಶಾಸಕ ಆರಗ ಜ್ಞಾನೇಂದ್ರ ಪ್ರಸನ್ನ ಭಟ್ ಅವರ ಮನೆಗೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ‘ಯಾವುದೇ ಕಾರಣಕ್ಕೂ ಪ್ರಸನ್ನಕುಮಾರ್ ಅವರನ್ನು ಬಂಧಿಸಲು ಬಿಡುವುದಿಲ್ಲ.ಅವರಿಗೆ ಅರೋಗ್ಯ ಸಮಸ್ಯೆಯಿದೆ.ಪೂರ್ವಿಕರು ಸಂಗ್ರಹಿಸಿದ ನೂರೈವತ್ತು ವರ್ಷಗಳ ಕೊಂಬುಗಳು. ಹಣಗೆರೆಯ ಧಾರ್ಮಿಕ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಗಂಧಪ್ರಸಾದ ಪ್ರಸನ್ನ ಅವರ ಮನೆಯಿಂದಲೇ ಹೋಗುತ್ತದೆ. ಧಾರ್ಮಿಕ ಉದ್ದೇಶಕ್ಕಾಗಿ ಶ್ರೀಗಂಧ ಸಂಗ್ರಹಿಸಲಾಗಿದೆ. ವ್ಯಾಪಾರಕ್ಕಾಗಿ ಅಲ್ಲ. ಒಂದು ವೇಳೆ ಕಾನೂನು ಜಾರಿ ಮಾಡುವುದಾದರೆ ನಮ್ಮ ಹೆಣದ ಮೇಲೆ ಆಗಲಿ. ಇದು ಪ್ರಕೃತಿ ಮತ್ತು ದೇಶದ ಸಂಪತ್ತಾಗಿದ್ದು ಅರಣ್ಯ ಇಲಾಖೆ ನೇತೃತ್ವದಲ್ಲಿ ರಕ್ಷಣೆಯ ಕಾರ್ಯಕ್ರಮ ಜಾರಿಯಾಗಲಿ’ ಎಂದು ಕಿಡಿಕಾರಿದರು.

ಈ ಶೋಧ ಕಾರ್ಯದಲ್ಲಿ ಶಿವಮೊಗ್ಗ ವನ್ಯಜೀವಿ ವಿಭಾಗದ ಎಸಿಎಫ್ ಬಿ.ಸುರೇಶ್, ಹಣಗೆರೆ ಆರ್‌ಎಫ್‌ಒ ಪವನ್ ಕುಮಾರ್ ನೇತೃತ್ವದಲ್ಲಿ ಸುಮಾರು 20ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು ಭಾಗವಹಿಸಿದ್ದರು.