
ಕರ್ನಾಟಕ ಸರ್ಕಾರದ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗವು ಇದೇ ಸೆಪ್ಟೆಂಬರ್ ತಿಂಗಳ 22ನೇ ತಾರೀಕಿನಿಂದ ರಾಜ್ಯದಾದ್ಯಂತ ಶೈಕ್ಷಣಿಕ,ಸಾಮಾಜಿಕ,ಆರ್ಥಿಕ,ಔದ್ಯೋಗಿಕ ಮತ್ತು ರಾಜಕೀಯ ಪ್ರತಿನಿತ್ಯಗಳ ಕುರಿತಾದ ಸಮಗ್ರ ಮಾಹಿತಿ ಸಂಗ್ರಹಿಸಲು ಸಮೀಕ್ಷೆ ನಡೆಸುತ್ತಿರುವುದು ತಮಗೆಲ್ಲ ಗೊತ್ತಿದೆ. ಜಾತಿಗಣತಿಯ ಪ್ರಕ್ರಿಯೆಯಲ್ಲಿ ನಮ್ಮೆಲ್ಲರ ಒಂದು ದೊಡ್ಡ ಜವಾಬ್ದಾರಿ ಇದೆ. ನಮ್ಮ ಸಮಾಜದ ಅಂದರೆ ಈಡಿಗ ಹಾಗೂ ಇತರ 25 ಪಂಗಡದ ಹೆಸರುಗಳನ್ನು ಪ್ರವರ್ಗ 2ಎ ಪಟ್ಟಿಯಲ್ಲಿ ನಮೂದಿಸಲಾಗಿದೆ. ವಿಪರ್ಯಾಸ ಎಂದರೆ ಬಿಲ್ಲವ ಕ್ರಿಶ್ಚಿಯನ್ ಮತ್ತು ಈಡಿಗ ಕ್ರಿಶ್ಚಿಯನ್ ಎಂದು ಪ್ರಕಟಿಸಿರುವುದು ದುರಂತ ಹಾಗೂ ನೋವಿನ ಸಂಗತಿಯಾಗಿದೆ. ಈ ಬಾರಿ ಜಾತಿ ಗಣತಿಯಲ್ಲಿ ನಾವೆಲ್ಲ ಒಗ್ಗಟ್ಟಾಗಿ ನಮ್ಮ ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡಬೇಕಿದೆ. ನಮ್ಮ ಈಡಿಗ ಹಾಗೂ ಇತರೆ 25 ಪಂಗಡ ಒಟ್ಟಾರೆ ಸುಮಾರು 45 ಲಕ್ಷ ಜನಸಂಖ್ಯೆ ಇರುವ ಜನಾಂಗವಾಗಿದೆ.

ಆದರೆ ಹಿಂದಿನ ಜಾತಿಗಣತಿ ವರದಿಯಲ್ಲಿ ಇದನ್ನು 15 ಲಕ್ಷ ಎಂದು ತೋರಿಸಲಾಗಿದೆ. ಏಕೆ ಹೀಗಾಗಿದೆ ಎಂದರೆ ಜಾತಿಗಣತಿ ಪಟ್ಟಿಯಲ್ಲಿ ಜಾತಿ ಕಾಲಂ 9ರಲ್ಲಿ ಹಾಗೂ ಉಪ ಪಂಗಡದ ಕಾಲಂ 10 ರಲ್ಲಿ ಜಾತಿಗಳನ್ನು ಪ್ರತ್ಯೇಕವಾಗಿ ಉಲ್ಲೇಖಿಸಿರುತ್ತಾರೆ. ಮಾಹಿತಿ ಕೊರತೆಯಿಂದಲೋ ಅಥವಾ ಉದ್ದೇಶಪೂರ್ವಕವಾಗಿಯೋ ಜಾತಿ ಕಾಲಂ ನಲ್ಲಿಯೇ ಈಡಿಗ,ಬಿಲ್ಲವ, ಪೂಜಾರಿ, ದೀವರ, ನಾಡಾರ್, ನಾಮಧಾರಿ ಇತ್ಯಾದಿ ಎಂದು ನಮೂದಿಸಿರುವುದರಿಂದ ಒಂದೊಂದು ಜಾತಿಯನ್ನು ಪ್ರತ್ಯೇಕಿಸಿ ಇತರೆ ಜಾತಿಗಳ ಪಟ್ಟಿಯಲ್ಲಿ ಸೇರಿಸಿರುವುದರಿಂದ ವ್ಯವಸ್ಥಿತವಾಗಿ ನಮ್ಮ ಜನಾಂಗದ ಜನಸಂಖ್ಯೆಯನ್ನು ಕಡಿಮೆ ಮಾಡಿರುವ ಸಾಧ್ಯತೆ ಇರಬಹುದು.

ಆದ್ದರಿಂದ ಈ ಬಾರಿ ಜಾತಿ ಗಣತಿಯಲ್ಲಿ ಈಡಿಗ ಒಳಗೊಂಡಂತೆ ಎಲ್ಲಾ 26 ಪಂಗಡಗಳು ಜಾತಿ ಕಾಲಂ 9ರಲ್ಲಿ ಈಡಿಗ ಎಂದು ಕಾಲಂ 10ರಲ್ಲಿ ಉಳಿದ ಪಂಗಡ ಗಳನ್ನು ನಮೂದಿಸುವ ಮೂಲಕ ನಮ್ಮ ನೈಜ ಜನಸಂಖ್ಯೆಯಾದ 45 ಲಕ್ಷವನ್ನು ಮುಟ್ಟುವ ಕೆಲಸವನ್ನು ಒಗ್ಗಟ್ಟಿನಿಂದ ಸರ್ಕಾರಕ್ಕೆ ತೋರಿಸಬೇಕಿದೆ. ಇದು ಕೇವಲ ಸರ್ಕಾರದ ದಾಖಲೆಗಳಲ್ಲಿ ಮಾತ್ರ ದಾಖಲೆ ಮಾಡಿ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತವಾಗದಂತೆ ತಡೆಯಲು ಇದೊಂದೇ ಮಾರ್ಗವಾಗಿದೆ.

ನಮ್ಮ ಜಾತಿಯನ್ನು ಕಾಲಂ ನಂಬರ್ 9ರಲ್ಲಿ ಈಡಿಗ ಎಂದು ಹಾಗೂ ಇನ್ನಿತರ ಪಂಗಡಗಳನ್ನು ಕಾಲಂ10ರಲ್ಲಿ ನಮೂದಿಸಬೇಕಾಗಿ ನಮ್ಮ ಕುಲಬಾಂಧವರಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಬೆಂಗಳೂರು ಕಾರ್ಯಕಾರಿ ಸಮಿತಿ ಸದಸ್ಯರಾದ ಹೆಚ್ ಎಸ್ ಕೃಷ್ಣ ಮೂರ್ತಿ ವಿನಂತಿಸಿದ್ದಾರೆ.


