ಬರಹ : ವಿಂಧ್ಯಾ ಎಸ್ ರೈ

ಅನುಕೂಲಕ್ಕಾಗಿ ಆವಿಷ್ಕಾರಗೊಂಡ ಕೆಲವೊಂದು ವಸ್ತುಗಳು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ನಮ್ಮ ಅನುಕೂಲತೆಗಾಗಿ ಉಪಯೋಗಿಸಲ್ಪಡುವ ವಸ್ತುಗಳೇ ಮುಂದಕ್ಕೆ ಅಪಾಯಕಾರಿಯಾಗಿ ಪರಿಣಮಿಸುವುದು ವಿಷಾದದ ಸಂಗತಿ,ಕಟು ಸತ್ಯವೂ ಹೌದು.ಕಡಿಮೆ ವೆಚ್ಚದಲ್ಲಿ ತಯಾರಾಗಿ, ಅತಿ ಕಡಿಮೆ ಬೆಲೆಗೆ ದೊರೆತು ಹೆಚ್ಚಾಗಿ ಬಳಕೆಯಲ್ಲಿರುವ ಪ್ಲಾಸ್ಟಿಕ್ ಇದರಲ್ಲಿ ಪ್ರಮುಖವಾಗಿ ಕಂಡು ಬರುವ ಹಾನಿಕಾರಕ ಉತ್ಪನ್ನ. ಪ್ಲಾಸ್ಟಿಕ್ ನಿಂದ ಮನುಕುಲಕ್ಕೆ ಬಹಳಷ್ಟು ಅನುಕೂಲತೆಗಳಿದ್ದರೂ ಅದರಿಂದ ನಾವು ಎದುರಿಸಬೇಕಾದ ತೊಂದರೆ,ದುಷ್ಪರಿಣಾಮ ಭೀಕರ.ಇದು ಮಾನವನ ಆರೋಗ್ಯ, ಸುತ್ತಮುತ್ತಲಿನ ಪರಿಸರಕ್ಕೆ ಹಾನಿಯುಂಟುಮಾಡುತ್ತಿದೆ. ಪ್ಲಾಸ್ಟಿಕ್ ನಿಂದಾಗುವ ಮಾಲಿನ್ಯದಲ್ಲಿ ಏಷ್ಯಾ ಮೊದಲ ಸ್ಥಾನದಲ್ಲಿದೆ. ಭಾರತ ದೇಶಕ್ಕೆ ಪ್ಲಾಸ್ಟಿಕ್ ನ ತ್ಯಾಜ್ಯ ದೊಡ್ಡ ತಲೆನೋವಾಗಿದೆ. ಪ್ಲಾಸ್ಟಿಕ್ ನಿಂದ ಉತ್ಪಾದಿಸಲ್ಪಟ್ಟ ವಸ್ತುಗಳು ಪರಿಸರ, ಮನುಷ್ಯ, ಸಸ್ಯ, ಪ್ರಾಣಿ ಸಂಕುಲಗಳ ಮೇಲೆ ತನ್ನ ದುಷ್ಪರಿಣಾಮ ಬೀರುತ್ತಿದೆ.ಇದರಲ್ಲಿ ಅಡಕವಾಗಿರುವ ಅನೇಕ ರಾಸಾಯನಿಕ ಪದಾರ್ಥಗಳು ಅಪಾಯವನ್ನುಂಟು ಮಾಡುವ ಅಂಶಗಳಾಗಿವೆ. ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳಸಲ್ಪಡುವ ವಿಷಕಾರಿ ರಾಸಾಯನಿಕಗಳು ಅನೇಕ ಬಗೆಯ ಕ್ಯಾನ್ಸರ್ ರೋಗಕ್ಕೆ, ನರಮಂಡಲಕ್ಕೆ, ಕಣ್ಣಿನ ಹಾನಿಗೆ,ಮಕ್ಕಳ ಬೆಳವಣಿಗೆಗೆ ತೊಂದರೆಯನ್ನುಂಟು ಮಾಡುವ ವಿಚಾರ ಎಲ್ಲರಿಗೂ ತಿಳಿದಿದ್ದರೂ ಬದುಕಿನ ದಿನಬಳಕೆಯ ಅವಶ್ಯಕ ವಸ್ತುಗಳಲ್ಲಿ ಪ್ಲಾಸ್ಟಿಕ್ ಅಗ್ರಸ್ಥಾನದಿಂದ ಇನ್ನೂ ಕೆಳಜಾರಿಲ್ಲವೆಂದರೆ ನಮಗಿನ್ನೂ ಅದರಿಂದಾಗುವ ಕೆಡುಕುಗಳ ಸರಿಯಾದ ಅಂದಾಜಿಲ್ಲದಿರುವುದು ಮನುಜನ ಜಾಣ ನಿರ್ಲಕ್ಷ್ಯತನವೇ ಇದಕ್ಕೆಲ್ಲ ಕಾರಣ. ಪ್ಲಾಸ್ಟಿಕ್ ತ್ಯಾಜ್ಯ ಮಣ್ಣಿನಲ್ಲಿ ಕರಗದೆ ಇರುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುವುದು,ಭೂಮಿಗೆ ನೀರಿನ ಇಂಗುವಿಕೆಯು ಅಸಾಧ್ಯ.ಇದರ ಪರಿಣಾಮವಾಗಿ ಅಂತರ್ಜಲ ಮಟ್ಟವೂ ಕುಸಿಯುವುದು. ಪ್ಲಾಸ್ಟಿಕ್ಕನ್ನು ಉರಿಸುವುದರಿಂದ ವಿಷಾನಿಲ ಬಿಡುಗಡೆಗೊಂಡು ವಾಯು ಮಾಲಿನ್ಯ ಉಂಟಾಗುವುದು.ಸರಿಯಾಗಿ ವಿಲೇವಾರಿ ಆಗದ ಕರಗದ ಪ್ಲಾಸ್ಟಿಕ್ ತ್ಯಾಜ್ಯ ನೀರನ್ನು ಸೇರಿ ಜಲ ಮಾಲಿನ್ಯವುಂಟಾಗಿ ಜಲಚರಗಳಿಗೂ ಆಪತ್ತು. ಪ್ಲಾಸ್ಟಿಕ್ ನಲ್ಲಿ ಸುತ್ತಿ ಎಸೆದ ತ್ಯಾಜ್ಯ ಪದಾರ್ಥಗಳನ್ನು ತಿನ್ನಲು ಬಯಸುವ ಪ್ರಾಣಿಗಳ ಪ್ರಾಣಕ್ಕೆ ಸಂಚಕಾರ ಒಡ್ಡಿದೆ.ಪರಿಸರ ಮತ್ತು ಮಾನವನ ಆರೋಗ್ಯಕ್ಕೆ ತೀವ್ರ ಹಾನಿಯನ್ನುಂಟುಮಾಡುವ ಪ್ಲಾಸ್ಟಿಕ್ ನ ಬಳಕೆಯನ್ನು ಕಡಿಮೆಗೊಳಿಸಿ, ಸಾಧ್ಯವಾದರೆ ತ್ಯಜಿಸಿ ಅದಕ್ಕೆ ಪರಿಹಾರವಾಗಿ ಲಭ್ಯವಾಗುವ ವಸ್ತುಗಳನ್ನು ಬಳಸುವ ಮೂಲಕ ಮನುಕುಲ,ಜೀವಸಂಕುಲಗಳ ಆರೋಗ್ಯದ ಕಾಳಜಿ ವಹಿಸುವ ಜವಾಬ್ದಾರಿಯನ್ನು ನಾವೆಲ್ಲ ಇನ್ನಾದರೂ ಮನಗಾಣಬೇಕಿದೆ.

Leave a Reply

Your email address will not be published. Required fields are marked *