
ಅದೊಂದು ಸುಂದರ ಮುಸ್ಸಂಜೆ . ಕರನೆಂಬ ಅಸುರನೊಬ್ಬ ದೇವತೆ ರೂಪಧರಿಸಿ ಅನ್ಯಮನಸ್ಕತೆಯಲ್ಲಿ ದೇವಲೋಕದ ಗಡಿಯಲ್ಲಿ ಸುತ್ತುತ್ತಿದ್ದ. ಹೀಗೆ ಸುತ್ತುತಿರುವಾಗ ತ್ರಿಲೋಕ ಸುಂದರಿಯಾದ ಅನು ಎನ್ನವ ಯಕ್ಷಿಯೊಬ್ಬಳು ದೇವಲೋಕದಲ್ಲಿ ವಾಯುವಿಹಾರದಲ್ಲಿ ತೊಡಗಿರುವಾಗ ಈ ಕರನ ಕಣ್ಣಿಗೆ ಬಿದ್ದಳು. ಕರ ತನ್ನ ಮನದಾಳದ ನೋವನ್ನೆಲ್ಲ ತಣಿಸಲೇ ಈ ಯಕ್ಷಿ ಬಂದಿದ್ದಾಳೋ ಎನ್ನುವಂತೆ ಈ ಅನುವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದ. ಅದೇನೋ ಆ ದೇವಲೋಕದ ಸುಂದರ ಮುಸ್ಸಂಜೆಯಲ್ಲಿ ಕರ ಮತ್ತೆ ಅನುವಿನ ನಡುವೆ ಪ್ರೇಮಾಂಕುರವಾಯಿತು. ಕರನ ತೋಳತೆಕ್ಕೆಯಲ್ಲಿ ಕರಗಿಹೋದ ಅನು ಅವನ ಬಿಸಿಯಪ್ಪಿಗೆಗೆ ಕರಗಿಯೇ ಹೋದಳು. ಈ ಕರ ಮತ್ತು ಅನುವಿನ ಸಮಾಗಮ ಮುಸ್ಸಂಜೆಯ ಸಮಯದಲ್ಲಿ ನಡೆದೇ ಹೋಯಿತು. ಇವರಿಬ್ಬರ ಸಮಾಗಮ ಮುಗಿದಾಗಲೇ ಯಕ್ಷಿ ಅನುವಿಗೆ ಗೊತ್ತಾಗಿದ್ದು ಈ ಕರ ದೇವತೆಯಲ್ಲ ಅಸುರನೆಂದು.

ಈ ಗೊಂದಲಮಯ ಮನಸ್ಥಿತಿಯಲ್ಲೇ ಅಪರಾತ್ರಿಯಲ್ಲಿ ಅನು ಗಂಡುಶಿಶುವೊಂದಕ್ಕೆ ಜನ್ಮನೀಡಿದಳು. ಕರ ಮತ್ತೆ ಅನು ಸಂಯೋಗದಿಂದ ಜನ್ಮತಳೆದಿದ್ದರಿಂದ ಅವನಿಗೆ ಕರೋನಾ ಅನ್ನುವ ನಾಮಕರಣ ಮಾಡಲಾಯಿತು. ಹುಟ್ಟವಾಗಲೇ ಅತ್ತ ಅಸುರನೂ ಆಗದೇ ಇತ್ತ ದೇವನಾಗದ ಗೊಂದಲದ ಸ್ಥಿತಿಯಲ್ಲಿದ್ದ ಕರೋನಾ. ತನ್ನ ಈ ಹುಟ್ಟಿನ ಕುರಿತಾಗಿ ಬಾಲ್ಯದಲ್ಲಿಯೇ ಅಸಹ್ಯ ಮೂಡಿದ ಈ ಕರೋನಾ ಸೃಷ್ಟಿಕರ್ತನ ಕುರಿತಾಗಿ ಕಠೋರವಾಗ ತಪಸ್ಸು ಮಾಡಿದ.

ಅನ್ನ ಆಹಾರ ನಿದ್ರಾದಿಗಳನ್ನು ಬಿಟ್ಟ. ಕರೋನನ ಈ ಭೀಕರವಾದ ತಪಸ್ಸಿಗೆ ಸೃಷ್ಟಿಕರ್ತ ಪ್ರತ್ಯಕ್ಷನಾದ” ಮಗನೇ ನಿನ್ನ ಕಠೋರವಾದ ತಪಸ್ಸಿಗೆ ಮೆಚ್ಚಿದೆ ಮಗನೆ. ನಿನಗೇನು ವರಬೇಕು ಕೇಳು … “ಆಗ ಕರೋನಾ ಕೇಳಿದ” ಸೃಷ್ಟಿಕರ್ತ ಈ ಲೋಕದಲ್ಲಿ ನನ್ನ ಹೆಸರು ಸದಾಕಾಲವೂ ಭಯದಿಂದ ಜನ ಕೇಳುವಂತಿರಬೇಕು. ನನ್ನಿಂದ ಒಳ್ಳಿತಾದಷ್ಟೇ ಕೆಡುಕೂ ಆಗಬೇಕು .. “ಆಗ ಸೃಷ್ಟಿಕರ್ತ ಹೇಳಿದ ” ಮಗನೇ ಕಲಿಯುಗದ ಪ್ರಥಮಪಾದದಲ್ಲಿ ಮನುಷ್ಯರು ಧರ್ಮಭ್ರಷ್ಟರಾಗಿರುತ್ತಾರೆ.

ಹಳ್ಳಿಗಳು ಕ್ಷೀಣಿಸುತ್ತವೆ. ಹಾಲು ಕೊಡುವ ಹಸುವನ್ನು ಪೂಜಿಸುವ ಬದಲಾಗಿ ತಿನ್ನುತ್ತಾರೆ. ಮಾತಾಪಿತೃಭಕ್ತಿ ಕ್ಷೀಣಿಸುತ್ತದೆ. ಕುಟುಂಬ ವ್ಯವಸ್ಥೆ ನಾಶವಾಗುತ್ತದೆ. ಮದುವೆಯಾಗಲು ಹೆಣ್ಣೇ ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜನ ಜನರ ನಡುವೆ ಧರ್ಮ ಧರ್ಮಗಳ ನಡುವೆ ಕಂದಕ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ನೀನು ಅವತಾರವೆತ್ತು.

ನಿನ್ನಿಂದಾಗಿ ಭೂಭಾರ ಕಡಿಮೆಯಾಗುತ್ತದೆ. ನಿನ್ನ ಕುರಿತಾಗಿ ವಿಶೇಷ ತಿಳುವಳಿಕೆಯಿಂದ ಹೊರಹೋಗದೇ ಮನೆಯೊಳಗೆ ಉಳಿದವರಿಗೆ ಏನೂ ಆಗದ ಸ್ಥಿತಿ ನಿರ್ಮಾಣವಾಗಲಿ ” ಎಂದ ಸೃಷ್ಟಿಕರ್ತ ತಥಾಸ್ತು ಅಂದನು.– ತೈರೊಳ್ಳಿ ಮಂಜುನಾಥ ಉಡುಪ
