

ವಿಶ್ವ ವಿಖ್ಯಾತ ಜೋಗ ಜಲಪಾತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಇದು ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಸುಮಾರು 269 ಮೀ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ ನದಿಯು ನಾಲ್ಕು ಸೀಳಾಗಿ ಧುಮುಕುವ ಜಾಗವೇ ಜೋಗ ಜಲಪಾತ. ವೈಭವದಿಂದ ಅವ್ಯಾಹತವಾಗಿ ಧುಮಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮಕುವ ರೋರರ್, ಬಳಕುತ್ತಾ ಜಾರುವ ರಾಣಿ(ಲೇಡಿ) ಮತ್ತು ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತಾ ನುಗ್ಗುವ ರಾಕೆಟ್ ಈ ನಾಲ್ಕು ಜಲಧಾರೆಯ ಸೊಬಗನ್ನು ಸವಿಯಲು ಪ್ರವಾಸಿಗರ ದಂಡು ಸದಾ ಹರಿದು ಬರುತಿದೆ.

ಜಲಪಾತ ಪ್ರದೇಶಗಳಲ್ಲಿ ನೂತನವಾಗಿ ನಿಲ್ಲಿಸಿರುವ ವೀಕ್ಷಣ ಗೋಪುರ ಹಾಗೂ ಪ್ರವೇಶ ದ್ವಾರಗಳ ಕಾಮಗಾರಿ ಅಧಿಕಾರಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ವೀಕ್ಷಣೆ ನಡೆಸಿದರು. ಜೋಗದಲ್ಲಿ ನೂತನವಾಗಿ ನಿರ್ಮಾಣವಾಗುವ ಪಂಚತಾರಾ ಹೋಟೆಲ್ ಬಳಿ ಭಾರಿ ಗಾತ್ರದ ಜಾಯಿಂಟ್ ವೀಲ್, ಕೇಬಲ್ ಕಾರ್ ಅಳವಡಿಕೆ ,ಗ್ಲಾಸ್ ಹೌಸ್ ಕೆಲಸಗಳಿಗೆ ಚಾಲನೆ ನೀಡಲಾಯಿತು. ಮುಂದಿನ ಮೂರು ತಿಂಗಳ ಒಳಗಾಗಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ನಿರ್ಧರಿಸಲಾಯಿತು.

ಶಾಸಕರಾದ ಬೇಳೂರು ಗೋಪಾಲಕೃಷ್ಣ ಮಾತನಾಡಿ, ರಾಜ್ಯದ, ಹೊರ ರಾಜ್ಯದ ಜನರು ಬರುವ ಹಾಗೆ ಜೋಗ ಜಲಪಾತ ಪ್ರದೇಶ ಅಭಿವೃದ್ಧಿಪಡಿಸಲಾಗುತ್ತಿದೆ. ರೂ. 184 ಕೋಟಿ ವೆಚ್ಚದ ಕಾಮಗಾರಿ ಇದಾಗಿದ್ದು ಈವರೆಗೆ 95 ಕೋಟಿ ಬಿಡುಗಡೆ ಮಾಡಲಾಗಿದೆ. ರೈನ್ ಡಾನ್ಸ್,ಫೌಂಟನ್ , ಗ್ಲಾಸ್ ಹೌಸ್ , ರೋಪ್ ವೇ, ಜಯಿಂಟ್ ವೀಲ್ ಇತರೆ ಮನೋರಂಜನೆ, ಪಾರ್ಕಿಂಗ್, ಪೀಕ್ ಸೀಜನ್ ಲ್ಲಿ ಜನದಟ್ಟಣೆ ನಿರ್ವಹಣೆ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಮೂಲಭೂತ ವ್ಯವಸ್ಥೆ ಮಾಡಲಾಗುವುದು. ಡ್ಯಾಂ ಕೆಳಗೆ ಜಾಗ ಇದ್ದು ಕೆಆರ್ ಎಸ್ ರೀತಿ ದೊಡ್ಡ ಪಾರ್ಕ್ ನ್ನು ಪ್ರಾಧಿಕಾರದಿಂದ ಮಾಡುವ ಯೋಜನೆ ಇದೆ. ಪಾರ್ಕಿಂಗ್, ಶೌಚಾಲಯ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

