- ಜಾನ್ಸ್ ಕ್ರೀಕ್ ಹೈಸ್ಕೂಲ್ ನ ಇಂಟರಾಕ್ಟ್ ಕ್ಲಬ್ ವತಿಯಿಂದ ನೆರವು
- ಪ್ರಕಾಶ್ ಹಾಗೂ ನಟ ಶರತ್ ಲೋಹಿತಾಶ್ವ ಭೇಟಿ

ಸರ್ಕಾರಿ ಪ್ರೌಢ ಶಾಲೆ ಹೊಸೂರು-ಗುಡ್ಡೇಕೇರಿ ಶಾಲೆಯಲ್ಲಿ ಅಮೇರಿಕಾದ ಜಾರ್ಜಿಯಾ ರಾಜ್ಯದ ಜಾನ್ಸ್ ಕ್ರೀಕ್ ಹೈಸ್ಕೂಲ್ ನ ಇಂಟರಾಕ್ಟ್ ಕ್ಲಬ್ ವತಿಯಿಂದ ವಿಜ್ಞಾನ ಬ್ಯಾಬ್ ಗೆ ಅವಶ್ಯಕ ಪರಿಕರಗಳು ಹಾಗೂ ರಾಸಾಯನಿಕ ವಸ್ತುಗಳನ್ನು ಕುಮಾರಿ ಅನಘ ಗೌಡ ಇವರ ಪರವಾಗಿ ಅವರ ತಂದೆ ಶ್ರೀ ಪ್ರಕಾಶ್ ಇವರು ಚಲನಚಿತ್ರ ನಟರಾದ ಶ್ರೀ ಶರತ್ ಲೋಹಿತಾಶ್ವ ಅವರೊಂದಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಅನಘರವರು ಈ ಶಾಲೆಯ ವಿದ್ಯಾರ್ಥಿಗಳೊಂದಿಗೆ ವರ್ಚುವಲ್ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದರು. ಶಾಲೆಯ ಇಂಟರಾಕ್ಟ್ ಕ್ಲಬ್ ನ ಚಟುವಟಿಕೆಯ ಒಂದು ಭಾಗವಾಗಿ ದೇಣಿಗೆ ಸಂಗ್ರಹಿಸಿ ಒಟ್ಟು 70 ಸಾವಿರದ ಮೌಲ್ಯದ ಲ್ಯಾಬ್ ಪರಿಕರವನ್ನು ಗುಡ್ಡೇಕೇರಿ ಹಾಗೂ ಕಮ್ಮರಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢ ಶಾಲಾ ವಿಭಾಗ)ಕ್ಕೆ ನೀಡಲಾಯಿತು. ಶ್ರೀ ಪ್ರಕಾಶ್ ಇವರು ಗುಡ್ಡೇಕೇರಿ ಶಾಲೆಯ ಶಾಲಾ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಕಳೆದ ನಾಲ್ಕುವರ್ಷದಿಂದ ದೊಡ್ಡ ಮೊತ್ತದ ಆರ್ಥಿಕ ನೆರವು ನೀಡುತ್ತಿದ್ದು, ಆ ವಿದ್ಯಾರ್ಥಿಗಳು ಕೂಡ ಈ ಕಾರ್ಯಕ್ರಮದಲ್ಲಿ ತಮ್ಮ ಸಾಧನೆಯನ್ನು ತಿಳಿಸಿ, ಧನ್ಯವಾದಗಳನ್ನು ಸಮರ್ಪಿಸಿದರು.

ಪ್ರಕಾಶ್ ರವರು ಮಾತನಾಡಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಸಂತಸಪಟ್ಟರು ಹಾಗು ಮುಂದೆಯೂ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು. ಶರತ್ ಲೋಹಿತಾಶ್ವರವರು ಮಾತನಾಡಿ ಸರ್ಕಾರಿ ಶಾಲೆ ಹಾಗೂ ಇಲ್ಲಿನ ಫಲಿತಾಂಶ ವಿದ್ಯಾರ್ಥಿಗಳ ಒಡನಾಟವನ್ನು ಪ್ರಶಂಸಿದರು. ಈ ಶಾಲೆಯ ರಿಯಲ್ ಹೀರೋಗಳು ಯಾರು ಎಂಬುದನ್ನು ಸಭೆಗೆ ತಿಳಿಸಿದರು. ರಂಗಕಲೆಯ ಚಟುವಟಿಕೆಗಳನ್ನು ಈ ಶಾಲೆಯಲ್ಲಿ ನಡೆಸುವ ಇಂಗಿತವನ್ನು ವ್ಯಕ್ತಪಡಿಸಿದರು. ಇವರೊಂದಿಗೆ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀ ದತ್ತಾತ್ರೇಯ, ಬೆಂಗಳೂರಿನ ಇಂಜಿನಿಯರ್ ಶ್ರೀ ಶಿವಪ್ರಸಾದ್ ರವರು ಹಾಜರಿದ್ದರು. ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಮಂಜುಬಾಬುರವರು ಅಧ್ಯಕ್ಷತೆ ವಹಿಸಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲರ ಸಹಕಾರವನ್ನು ಸ್ಮರಿಸಿದರು ಹಾಗೂ ಇಂತಹ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಸುರೇಶ್ ಎಂ ಜಿ ಮೇದೊಳಿಗೆ ದಾನಿಗಳು ನಮ್ಮ ಶಕ್ತಿ, ನಿರಂತರವಾಗಿ ಶಾಲೆಗೆ ಬರುತ್ತಿದ್ದು, ಮಾರ್ಗದರ್ಶನವನ್ನು ನೀಡಬೇಕಾಗಿ ಕೋರಿದರು. ಕಾರ್ಯಕ್ರಮದಲ್ಲಿ ಶ್ರೀ ಹಸಿರುಮನೆ ಮಹಾಬಲೇಶ್, ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಜಯೇಶ್ ಹೆಗ್ಡೆ ಹೊಸೂರು ಮತ್ತು ಶ್ರೀ ಅಶೋಕ್ ಓಣಿಮನೆ, ಸ.ಹಿ.ಪ್ರಾ.ಶಾಲೆ ಗುಡ್ಡೇಕೇರಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಜಯಚಂದ್ರ, ಪ್ರೌಢ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರುಗಳು, ಹಿರಿಯ ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು,ಪೋಷಕರು, ಭಾಗವಹಿಸಿದ್ದು, ಶಾಲಾ ಆರಂಭದ ದಿನದ ಒಳ್ಳೆಯ ಕಾರ್ಯಕ್ರಮ ಈ ಶೈಕ್ಷಣಿಕ ವರ್ಷಕ್ಕೆ ಶುಭ-ಫಲಪ್ರದವಾಗಿರಲಿ ಎಂದು ಆಶಿಸಿದರು.

