ಕನ್ನಡ ಎಂದಾಕ್ಷಣ ನಮಗೆ ನೆನಪಿಗೆ ಬರೋದು ಹಚ್ಚ ಹಸುರಿನಿಂದ ಕೂಡಿರುವ ಸುಂದರ ಬೆಟ್ಟ ಗುಡ್ಡಗಳು, ಸೊಗಸಾಗಿ ಹರಿಯುವ ನದಿಗಳು,ಸಾಧು ಸಂತರು- ದಾಸರು- ಶಿವಶರಣರು -ಕವಿಗಳಿಂದ ಕಂಗೊಳಿಸುತ್ತಿರುವ ಶ್ರೀಗಂಧದ ನಾಡು ಕರ್ನಾಟಕ. ಈ ಹೆಸರಿಗೆ ಒಂದು ಅದ್ಭುತ ಶಕ್ತಿ ಇದೆ. ಪ್ರತಿ ವರ್ಷದಂತೆ ಇಂದು ಸಮಸ್ತ ಕನ್ನಡಿಗರು ನವೆಂಬರ್ 01 ಕನ್ನಡ ಹಬ್ಬ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿದ್ದೇವೆ.ಕರ್ನಾಟಕದ ಶ್ರೀಮಂತ ಸಂಸ್ಕೃತಿ, ಭಾಷೆ,ಪರಂಪರೆ ಮತ್ತು ವೈವಿಧ್ಯತೆಯನ್ನು ಗೌರವಿಸಲು ಒಂದು ರೋಮಾಂಚಕ ಆಚರಣೆಯಾಗಿದೆ.ಇಂದು ಹಲವಾರು ಪರ ಭಾಷೆಗಳ ನಡುವೆ ಕನ್ನಡವು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾದಂತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕನ್ನಡ ಶಾಲೆಯಲ್ಲಿ ಓದುವವರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಾ ಬರುತ್ತಿದೆ .ಇಂಗ್ಲಿಷ್ ಶಿಕ್ಷಣ ಇಂದು ದೊಡ್ಡ ಮಟ್ಟದಲ್ಲಿ ಎಲ್ಲರ ಮನಸ್ಸಿನಲ್ಲಿ ಹಿಡಿತ ಸಾಧಿಸಿದೆ ಎಂದರೆ ಬಹುಶಃ ತಪ್ಪಾಗುವುದಿಲ್ಲ .ಕನ್ನಡವನ್ನು ಇಂದು ಹೆಚ್ಚಾಗಿ ಆರ್ಥಿಕವಾಗಿ ಸದೃಢರಲ್ಲದವರು, ಕೂಲಿಕಾರರು ,ಬಡವರು, ಕಾರ್ಮಿಕರು ಕಲಿಯುತ್ತಿದ್ದಾರೆ.ಒಂದು ರೀತಿಯಲ್ಲಿ ಇವರೇ ನೋಡಿ ನಿಜವಾಗಿಯೂ ಕನ್ನಡವನ್ನು ರಕ್ಷಿಸಲು ಹೆಚ್ಚು ಜವಾಬ್ದಾರಿಯನ್ನು ಹೊತ್ತವರು. ಆದರೆ ಕನ್ನಡ ಶಾಲೆಯಲ್ಲಿ ಓದಿದವರನ್ನು ಎಲ್ಲೋ ಒಂದು ಕಡೆ ಕೀಳಾಗಿ ಕಾಣುವ ಜನರು ಕೂಡ ನಮ್ಮ ಸುತ್ತಮುತ್ತ ಇದ್ದಾರೆ ಎಂಬುದು ವಿಪರ್ಯಾಸ. ಪ್ರತಿ ಹಳ್ಳಿಗಳಲ್ಲಿಯೂ ಇಂಗ್ಲಿಷ್ ಮಾಧ್ಯಮದ ಶಾಲೆಗಳ ಸಂಖ್ಯೆ ಹೆಚ್ಚಾಗುತ್ತಿವೆ ಜೊತೆಗೆ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಯಲ್ಲಿ ಓದಿಸಿದರೆ ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎನ್ನುವ ಮಾನಸಿಕ ಭಾವನೆಯನ್ನು ಹೊಂದಿರುವಂಥದ್ದು ನಿಜಕ್ಕೂ ಬೇಸರದ ಸಂಗತಿ. ಹೆಚ್ಚಿನ ಇಂಗ್ಲಿಷ್ ಶಾಲೆಗಳ ಶಾಲಾ ಶುಲ್ಕವನ್ನ ಕೇಳಿದರೆ ಭಯ ಆಗುತ್ತೆ. ಇದೇ ಸ್ಥಿತಿ ಮುಂದಿನ ದಿನಗಳಲ್ಲಿ ಮುಂದುವರೆದರೆ ಕ್ರಮೇಣ ಕನ್ನಡ ಶಾಲೆಗಳನ್ನು ಮುಚ್ಚುವ ಸ್ಥಿತಿ ಬಂದರೂ ಕೂಡ ಯಾವುದೇ ರೀತಿಯಾದಂತಹ ಆಶ್ಚರ್ಯವಿಲ್ಲ.ಸರ್ಕಾರವು ಕನ್ನಡ ಮಾಧ್ಯಮ ಶಾಲೆಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕು. ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅಂತರ್ಜಾಲ, ಸಂಗೀತ, ಯಕ್ಷಗಾನ ಕಟ್ಟಡದ ವ್ಯವಸ್ಥೆ ಸೇರಿದಂತೆ ವಿವಿಧ ಸೌಲತ್ತುಗಳನ್ನು ಒದಗಿಸಿಕೊಡಬೇಕು .ಕನ್ನಡ ಮಾಧ್ಯಮದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ವ್ಯವಸ್ಥೆ ಮಾಡಬೇಕು ಮತ್ತು ಅಲ್ಲಿಯೇ ಇಂಗ್ಲಿಷ್ ಕಲಿಸುವಂತಹ ಏರ್ಪಾಡು ಮಾಡುವುದರಿಂದ ಶಿಕ್ಷಣವು ಸುಲಭವಾಗುತ್ತದೆ .ವಿದ್ಯಾರ್ಥಿಗಳು ಪೋಷಕರು ಇಂಗ್ಲೀಷ್ ಶಾಲೆಯನ್ನು ಹುಡುಕಿಕೊಂಡು ಹೋಗುವ ಅನಿವಾರ್ಯತೆಯು ತಪ್ಪುತ್ತದೆ ಮತ್ತು ಕನ್ನಡ ಶಾಲೆಗಳನ್ನು ಮುಚ್ಚುವ ಅವಶ್ಯಕತೆಗಳು ಬರುವುದಿಲ್ಲ.

ಇಂದು ನಾವು ಒಂದು ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ನವೆಂಬರ್ ತಿಂಗಳು ಹತ್ತಿರ ಬರುತ್ತಾ ಇದೆ ಅಂತ ಗೊತ್ತಾದ್ರೆ ಸಾಕು ಪ್ರತಿ ವರ್ಷವೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪರಭಾಷೆಕರಿಗೆ ಧೀಮಂತ ಭಾಷೆ ಕನ್ನಡದ ಕುರಿತು ಅರಿವು ಮೂಡಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಸಮಾರಂಭಗಳನ್ನು ಆಚರಿಸುತ್ತೇವೆ ಆದರೆ ಈ ಕಾರ್ಯಕ್ರಮದ ಉದ್ದೇಶವನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವವರ ಸಂಖ್ಯೆ ತುಂಬಾ ಕಡಿಮೆ ಇದೆ.ಇನ್ನು ಮುಖ್ಯವಾಗಿ ವಿಜ್ಞಾನ ಹಾಗೂ ತಂತ್ರಜ್ಞಾನ ಜನಸಾಮಾನ್ಯರ ದಿನನಿತ್ಯ ಬದುಕಿನಲ್ಲಿ ತುಂಬಾ ಹತ್ತಿರವಾಗುತ್ತಾ ಅವರಲ್ಲಿ ಉತ್ತಮ ಬೆಳವಣಿಗೆಯನ್ನು ರೂಪಿಸುತ್ತಿದೆ. ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಇಂತಹದೇ ಆದ ಭಾಷೆ ಅಂತ ಇಲ್ಲ. ನಾವು ಯಾವ ಭಾಷೆಯಲ್ಲಿ ಅವುಗಳನ್ನ ರಚಿಸಿರುತ್ತೇವೋ ಅವು ಆ ಭಾಷೆಯಲ್ಲಿ ರಚನೆಯಾಗುತ್ತ ಸಾಗುತ್ತವೆ. ಈ ವಿಜ್ಞಾನ ತಂತ್ರಜ್ಞಾನವು ಹೆಚ್ಚಾಗಿ ಇಂಗ್ಲೆಂಡ್, ಜರ್ಮನಿ ,ಅಮೇರಿಕಾ ,ಜಪಾನ್ ಸೇರಿದಂತೆ ಹಲವಾರು ಹೊರ ದೇಶಗಳಿಂದ ಬಂದಂತಹ ಜ್ಞಾನ ಶಾಖೆಗಳು. ಹೀಗಾಗಿ ಅವು ನಮ್ಮೊಂದಿಗೆ ಇಂಗ್ಲಿಷ್ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡುತ್ತವೆ ಹಾಗೂ ನಮಗೂ ಕೂಡ ಇದು ತುಂಬಾ ಅನಿವಾರ್ಯ. ಆದರೆ ನಾವು ಮಾಡಬೇಕಾಗಿರುವ ಕೆಲಸ ಇಷ್ಟೇ.ಸೃಷ್ಟಿ ಆದಂತಹ ವಿಜ್ಞಾನ ತಂತ್ರಜ್ಞಾನವನ್ನು ಕನ್ನಡ ಭಾಷೆಗೆ ತರಬೇಕಾಗಿದೆ ಮತ್ತು ಅದನ್ನು ಕನ್ನಡಿಗರಿಗೆ ತಲುಪಿಸುವಂತಹ ಪ್ರಯತ್ನವನ್ನು ಕೂಡ ಮಾಡಬೇಕಿದೆ. ಆಗ ಈ ತಂತ್ರಜ್ಞಾನ ವಿಜ್ಞಾನ ನಮ್ಮದೇ ಎನ್ನುವಂತಹ ಮನೋಭಾವ ಕನ್ನಡಿಗರಲ್ಲಿ ಮೂಡುವಲ್ಲಿ ಸಹಕಾರಿಯಾಗುತ್ತದೆ. ಜೊತೆಗೆ ಈ ತಂತ್ರಜ್ಞಾನ ವಿಜ್ಞಾನವನ್ನು ಕನ್ನಡ ಭಾಷೆಯಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ, ಆರ್ಥಿಕವಾಗಿ ಹಿಂದುಳಿದಂತಹ ವಿದ್ಯಾರ್ಥಿಗಳಿಗೆ ತಲುಪಿಸಬೇಕಾದಂತಹ ದೊಡ್ಡ ಪ್ರಯತ್ನವನ್ನು ಮಾಡಬೇಕಿದೆ. ಆಗ ಮಾತ್ರ ಈ ವಿಜ್ಞಾನ ತಂತ್ರಜ್ಞಾನ ಅನ್ನುವಂಥದ್ದು ಕನ್ನಡಿಗರಿಗೆ ತೀರ ಹತ್ತಿರವಾಗುತ್ತಾ ಹೋಗುತ್ತದೆ.ಕೆಲವೊಮ್ಮೆ ಮಾಧ್ಯಮಗಳಲ್ಲಿ ಹಾಗೂ ಜಾಹೀರಾತುಗಳಲ್ಲಿ ಅತಿಯಾಗಿ ಬಳಕೆಯಾಗುವ ಇಂಗ್ಲೀಷ್ ನಿಂದ ಕನ್ನಡದ ಪ್ರಾಮುಖ್ಯತೆ ಎಲ್ಲೋ ಒಂದು ಕಡೆ ಕಡಿಮೆಯಾಗುತ್ತಿದೆ ಎಂಬ ಆಕ್ಷೇಪಗಳು ಅಲ್ಲಲ್ಲಿ ಕೇಳಿ ಬರುತ್ತಿದೆ.ಆದ್ದರಿಂದ ಮಾಧ್ಯಮಗಳು ಕನ್ನಡ ಭಾಷೆಯ ಬಳಕೆಗೆ ಸಾಧ್ಯವಾದಷ್ಟು ಪ್ರೋತ್ಸಾಹವನ್ನು ನೀಡಬೇಕು, ಭಾಷೆಯ ಶುದ್ಧತೆಯನ್ನು ಕಾಪಾಡಬೇಕು. ಕನ್ನಡದ ಸಂಸ್ಕೃತಿಯನ್ನು ಕಾಪಾಡುವಂತಹ ಕಾರ್ಯಕ್ರಮಗಳನ್ನ ಪ್ರಸಾರ ಮಾಡಬೇಕು.ಉದ್ಯೋಗ ,ಶಿಕ್ಷಣ, ಸಾರ್ವಜನಿಕ ಗೌರವ ,ಎಲ್ಲದಕ್ಕೂ ಇಂಗ್ಲೀಷ್ ಅನಿವಾರ್ಯವಾಗುವಂತಹ ಕಾಲಘಟ್ಟದಲ್ಲಿ ನಾವೆಂದು ತಲುಪಿದ್ದೇವೆ. ಯಾವುದೇ ಒಂದು ಭಾಷೆ ಬೆಳೆಯಬೇಕಾದರೆ ಅದನ್ನು ಬಳಸುವವರ ಸಂಖ್ಯೆಯು ಸಹ ಅಧಿಕವಾಗಿ ಇರಬೇಕು ಜೊತೆಗೆ ಭಾಷೆ ಗೊತ್ತಿಲ್ಲದವರಿಗೆ ಗೊತ್ತು ಮಾಡುವ ಪ್ರಯತ್ನವನ್ನು ಕೂಡ ಮಾಡಬೇಕು. ಇದಕ್ಕೆ ಒಂದು ಉತ್ತಮ ಉದಾಹರಣೆಯನ್ನು ನಾವು ನೋಡುವುದಾದರೆ ಮೊದಲಿಂದಲೂ ಕನ್ನಡದ ವಿಚಾರ ಬಂದಾಗ ನಮ್ಮ ಆಟೋ ಚಾಲಕರ ಪಾತ್ರ ಇದೆಯಲ್ಲ ನಿಜಕ್ಕೂ ತುಂಬಾ ದೊಡ್ಡದು .ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ಕನ್ನಡ ತಿಳಿಯದ ಪ್ರಯಾಣಿಕರಿಗೆ ಆಟೋ ಚಾಲಕನೊಬ್ಬ “ಲರ್ನ್ ಕನ್ನಡ ವಿಥ್ ಆಟೋ ಕನ್ನಡಿಗ “ಎಂಬ ಬೋರ್ಡ್ ಸಿದ್ದಪಡಿಸಿ ಅದರಲ್ಲಿ ಬೇಸಿಕ್ ಕನ್ನಡ ಪದಗಳನ್ನು ಬರೆದು ಪರ ಭಾಷೆಯವರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ವಿನೂತನ ಕೆಲಸ ಮಾಡಿರೋದು ನಿಜಕ್ಕೂ ಮೆಚ್ಚುವಂಥದ್ದು.ಇಂದು ಸಾಕಷ್ಟು ನಾಮಫಲಕದಲ್ಲಿ ತಪ್ಪು ಬರವಣಿಗೆಯಿಂದ ಭಾಷೆಯ ಶುದ್ಧತೆ ಕಳೆದುಹೋಗುತ್ತಿರುವುದು ನಿಜಕ್ಕೂ ಆತಂಕಕಾರಿ. ಇದು ಭಾಷೆಯನ್ನು ಅವಮಾನಿಸುವಂತೆ ಮಾಡುತ್ತದೆ. ಇದನ್ನು ಸರಿಪಡಿಸಿಕೊಂಡರೆ ನಮ್ಮ ಭಾಷೆಯ ವೈವಿಧ್ಯತೆ ಇನ್ನಷ್ಟು ಸೌಂದರ್ಯವಾಗುತ್ತದೆ. ಇಂದು ಕನ್ನಡ ರಾಜ್ಯೋತ್ಸವದ ಹಿಂದಿನ ಹೋರಾಟವನ್ನು ನಾವು ಮರೆಯುತ್ತಿದ್ದೇವೆ ಎಂದು ನನಗನಿಸುತ್ತದೆ.ಕರುನಾಡ ಏಕೀಕರಣದ ಮೂಲ ಉದ್ದೇಶವೇ ನಾಡು-ನುಡಿಯ ಏಳಿಗೆ ಆದರೆ ಅಭಿವೃದ್ಧಿಯ ನೆಪವೊಡ್ಡಿ ನಮ್ಮ ಭಾಷೆ,ಸಂಸ್ಕೃತಿಗಳನ್ನು ನಾವು ಗಾಳಿಗೆ ತೂರುತ್ತಿದ್ದೇವೆ. ಅದರ ಫಲವೇ ಇಂದು ರಾಜಧಾನಿಯಲ್ಲಿಯೇ ನಮ್ಮ ಭಾಷೆಯನ್ನು ಹುಡುಕುವ, ನಮ್ಮ ಭಾಷೆ ಮಾತನಾಡಿರೆಂದು ಬೇಡುವ ಪರಿಸ್ಥಿತಿ ಮನೆಮಾಡಿದೆ.ಇಂದು ನಮ್ಮೆಲ್ಲರ ಮನಸ್ಥಿತಿ ಯಾವ ಹಂತದಲ್ಲಿದೆಯೆಂದರೆ ಸಮಾಜಿಕವಾಗಿ ನಮ್ಮ ಭಾಷೆಯನ್ನು ಮಾತನಾಡುವುದೇ ಅವಮಾನವೆಂದುಕೊಂಡು ಅಸಡ್ಡೆ ತೋರುವ ಜನರಿಂದ ತುಂಬಿಹೋಗಿದೆ.ವಿಶ್ವದ ಅತ್ಯಂತ ಪ್ರಾಚೀನ ಭಾಷೆಯಲ್ಲಿ ಕನ್ನಡ ಕೂಡ ಒಂದು.ಆದರೆ ಇಂದಿನ ವಿಪರ್ಯಾಸ ನೋಡಿ ಶಾಲೆಯಲ್ಲಿ ಬಿಡಿ ಮನೆಯಲ್ಲೂ ಕೂಡ ಮಕ್ಕಳಿಗೆ ತಂದೆ ತಾಯಿ ಕನ್ನಡ ಮಾತಾಡದಂತೆ ಬೆಳೆಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಮಕ್ಕಳ ಮುಂದಿನ ಭವಿಷ್ಯಕ್ಕೆ ಇಂಗ್ಲೀಷ್ ಭಾಷೆ ಅನಿವಾರ್ಯ ಆಗಿರಬಹುದು ಆದರೆ ಕನ್ನಡ ಭಾಷೆಯ ಅಧ್ಯಯನಕ್ಕೆ ಉತ್ತೇಜನ ನೀಡದೆ ಇರುವುದು ಎಷ್ಟರ ಮಟ್ಟಿಗೆ ಸರಿ? ಇನ್ನು ಮುಂದಾದರೂ ಮಕ್ಕಳಿಗೆ ಕನ್ನಡದ ಕುರಿತು ತಿಳಿಸೋಣ. ನಮ್ಮ ಜನನಾಯಕರು ನಾಡು ನುಡಿ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಯೋಜನೆಗಳನ್ನು ಹೆಚ್ಚು ಮಾಡಬೇಕು. ಕನ್ನಡ ಸಾಹಿತ್ಯ ಸಮ್ಮೇಳನಗಳನ್ನ ಮಾಡಬೇಕು ,ಸರಕಾರಿ ಕಚೇರಿಗಳಲ್ಲಿ ಕನ್ನಡ ಕಡ್ಡಾಯ ಎನ್ನುವಂತಹ ಕಾನೂನುಗಳನ್ನು ಮಾಡಬೇಕು,ಕನ್ನಡಪರ ಸಂಘಟನೆಗಳು ನವೆಂಬರ್ ತಿಂಗಳಿನ ಕನ್ನಡ ರಾಜ್ಯೋತ್ಸವವನ್ನು ಮೀಸಲಾಗಿಸದೇ ಕನ್ನಡ ಪರ ಹೋರಾಟಗಳನ್ನು ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನ ಬೇರೆ ದಿನಗಳಲ್ಲೂ ಆಯೋಜಿಸುವುದರಿಂದ ಕನ್ನಡ ರಾಜ್ಯೋತ್ಸವಕ್ಕೆ ಅರ್ಥಪೂರ್ಣ ಎಣಿಸುತ್ತದೆ.ಈಗ ಕನ್ನಡದ ಮೇಲೆ ಇತರೆ ಭಾಷಿಕರ ದಬ್ಬಾಳಿಕೆ ಹೆಚ್ಚಾಗಿದೆ. ಕನ್ನಡಿಗರಿಗೆ ಉದ್ಯೋಗ ದೊರಕುವುದು ಕಷ್ಟವಾಗಿದೆ. ಇಂತಹ ಸಮಯದಲ್ಲಿ ಕನ್ನಡದ ಅಸ್ಮಿತೆಗಾಗಿ ಎಲ್ಲರೂ ಹೋರಾಡಬೇಕಾಗಿದೆ. ಪ್ರತಿನಿತ್ಯ ನಾವು ಕನ್ನಡಿಗರಾಗಬೇಕು. ಕನ್ನಡ ಭಾಷೆಯು ಎಂದಿಗೂ ನಮ್ಮ ಹೆತ್ತ ತಾಯಿಯಂತೆ ಉಳಿಯಲಿ ಅದರ ಜೊತೆ ಇತರ ಭಾಷೆಗಳನ್ನು ನಮ್ಮ ಸಂಬಂಧಿಕರಂತೆ ಭಾವಿಸೋಣ.ಕನ್ನಡವನ್ನು ಯಾರೂ ಬೆಳೆಸಬೇಕಿಲ್ಲ ಬಳಸಿದರೆ ಸಾಕು ಅದು ನಮ್ಮನ್ನೇ ಬೆಳೆಸುತ್ತದೆ.ಮತ್ತೊಮ್ಮೆ ಎಲ್ಲರೂ ಹೇಳುವಂತೆ ನವೆಂಬರ್ 01ರ ಕನ್ನಡಿಗರಾಗುವುದು ಬೇಡ.ಕನ್ನಡ ನಿರಂತರವಾಗಲಿ.ಜಯ ಭಾರತ ಜನನಿಯ ತನುಜಾತೆ,ಜಯಹೇ ಕರ್ನಾಟಕ ಮಾತೆ
ಬರಹ… ಗ್ರೀಷ್ಮ ಕೊರಡಿಹಿಟ್ಲು


