Oplus_131072

ತ್ತೀಚಿನ ದಿನಗಳ ಶಾಲಾ ಕಾಲೇಜುಗಳಲ್ಲಿ ಜರುಗುತ್ತಿರುವ ಒಂದು ವಿಶಿಷ್ಟವಾದ ವಿದ್ಯಮಾನವು ಗಂಭೀರವಾಗಿ ಚರ್ಚೆಗೆ ಗ್ರಾಸವಾಗುತ್ತಿದೆ. ಅದೇನೆಂದರೆ ಕಾರಿಡಾರ್ ಶಿಸ್ತಿಗೆ ಅರ್ಥ ಕೊಡವ ಕಾಲವಿದು ಎಂದು. ಕಾರಿಡಾರ್ ಅನ್ನುವಂತದ್ದು ಪ್ರತಿಯೊಂದು ಶಾಲೆ ಹಾಗೂ ಕಾಲೇಜುಗಳ ಜೀವನದಲ್ಲಿ ವಿದ್ಯಾರ್ಥಿಗಳ ನೆನಪುಗಳಿಗೆ ಜೀವನಾಡಿ. ತರಗತಿಗಳ ನಡುವೆ ಸಂಪರ್ಕ ಕಲ್ಪಿಸಿಕೊಡುವ ನಿಶ್ಚಿತ ಹಾದಿ. ಆದರೆ ಇಂದು ಅದೆಷ್ಟೋ ಶಾಲಾ ಕಾಲೇಜುಗಳಲ್ಲಿ ಆ ಹಾದಿಯೇ ಗೊಂದಲದ ಗೂಡಾಗಿದೆ. ಕಾಲೇಜಿನ ಕಾರಿಡಾರಿನಲ್ಲಿ ವಿದ್ಯಾರ್ಥಿಗಳ ಅನಾವಶ್ಯಕ ಓಡಾಟ, ತಲೆಗೆ ಏರಿದ ಘರ್ಜನೆ, ಸೆಲ್ಫಿ, ಪ್ರಪಂಚದ ಪರಿವೇ ಇಲ್ಲದ ಒಂದಷ್ಟು ನಡವಳಿಕೆಗಳು ಸಂಸ್ಥೆಯ ನಿಯಮಗಳಿಗೆ ಧಕ್ಕೆ ಉಂಟು ಮಾಡುತ್ತದೆ. ಇದು ಕೇವಲ ಒಂದು ಶಾಲಾ ಅಥವಾ ಕಾಲೇಜು ಕಥೆಯಲ್ಲ.ಒಮ್ಮೆ ಆಲೋಚನೆ ಮಾಡಿ, ರಸ್ತೆ ಮೇಲೆ ಟ್ರಾಫಿಕ್ ನಿಯಮಗಳು ಇಲ್ಲದಿದ್ದರೆ ಏನಾಗುತ್ತಿತ್ತು? ಪ್ರತಿಯೊಬ್ಬ ವಾಹನ ಚಲಾವಣೆ ತಾನು ಬಯಸಿದಂತೆ ಮಾಡಿದರೆ? ಎಡಬಲ ನೋಡದೆ ತಿರುವುಗಳೆತ್ತಿದರೆ? ಒಂದು ಮಾತಿದೆ “ಅಶಿಸ್ತಿನಿಂದ ರಸ್ತೆ ಅವ್ಯವಸ್ಥೆಗೊಳ್ಳುತ್ತದೆ, ಮನುಷ್ಯರ ಬದುಕು ಅಸಹ್ಯವಾಗುತ್ತದೆ”. ಈಗ ಅದೇ ಧೋರಣೆ ನಮ್ಮ ಶಾಲಾ ಕಾಲೇಜು ಕಾರಿಡಾರ್‌ಗಳಿಗೂ ಅನ್ವಯವಾಗುತ್ತಿದೆ. ಯುರೋಪ್‌ನ ಕೆಲವು ದೇಶಗಳಲ್ಲಿ ಶಾಲಾ ಕಾಲೇಜುಗಳ ಕಾರಿಡಾರ್‌ನ ಶಿಸ್ತು ಕಡ್ಡಾಯವಾಗಿ ಪಾಲಿಸಬೇಕಿದ್ದು, ಒಂದು ಪಕ್ಷ ತಪ್ಪಾಗಿ ನಡೆದುಕೊಂಡರೆ ವಿದ್ಯಾರ್ಥಿಗಳು ಶಿಕ್ಷೆಗೆ ಅರ್ಹರಾಗುತ್ತಾರೆ.

ಒಂದು ರೀತಿ ಈ ಕಾನೂನು ಒಳ್ಳೆಯದೇ ಅನಿಸುತ್ತದೆ. ಏಕೆಂದರೆ ಕಾರಿಡಾರ್‌ನಲ್ಲಿ ಫ್ಯಾಶನ್ ಶೋ, ಫೋಟೋಶೂಟ್, ಡ್ರಾಮಾ ಇವೆಲ್ಲವೂ ಶಾಲೆಯ ವ್ಯವಸ್ಥೆಯನ್ನು ಕೆಡಿಸುತ್ತದೆ. ಹಾಗೆ ಇಂಗ್ಲೆಂಡ್ ,ಜಪಾನ್, ಜರ್ಮನಿ ದೇಶಗಳಲ್ಲಿ ಸಾರ್ವಜನಿಕವಾಗಿ ಓಡಾಡುವ ಸ್ಥಳಗಳಲ್ಲಿ ಜನರು ಎಡ ಅಥವಾ ಬಲ ಬದಿ ಶಿಸ್ತಿನಿಂದ ನಡೆಯುತ್ತಾರೆ. ರೈಲು ನಿಲ್ದಾಣಗಳಲ್ಲಿ, ಮೆಟ್ರೋಗಳ ಕಾರಿಡಾರ್ಗಳಲ್ಲಿ ಜನರ ನಡಿಗೆ ಸರಳ, ನಿರಂತರ. ಅಲ್ಲಿ ಇದು ಕಾನೂನು ಅಲ್ಲ ಒಂದು ಚಿಂತನಾಶೀಲ ಸಮಾಜದ ಅಭ್ಯಾಸ. ಇಂದು ನಮ್ಮಲ್ಲೂ ಈ ಅಭ್ಯಾಸ ಬೇಕಿದೆ.ಪಠ್ಯಪುಸ್ತಕಗಳು ನಿಮಗೆ ಏನು ಕಳಿಸುತ್ತದೆ? ಹಿರಿಯರಿಗೆ ಗೌರವ ಕೊಡು, ತಾಳ್ಮೆ ಸಂಯಮದಿಂದಿರು. ಆದರೆ ಈ ಪಾಠದ ನಡುವಿನ ಬ್ರೇಕ್ ನಲ್ಲಿ ಕೆಲವರು ಏನು ಕೆಲಸವಿಲ್ಲದಿದ್ದರೂ ಸುಮ್ಮನೆ ಓಡಾಡಿಕೊಂಡಿರುತ್ತಾರೆ. ಈ ಶಿಸ್ತು ಎಂಬ ದೊಡ್ಡದಾದ ಮಾತಿಗೆ ನಡಿಗೆ ಬೇಕಾ ಎನ್ನಿಸಬಹುದು. ಆದರೆ ಬೆಳಗ್ಗೆ 9 ಗಂಟೆಗೆ ಬೆಲ್ ಬಾರಿಸಿದ ನಂತರ ಕಾರಿಡಾರ್ಗಳಲ್ಲಿ ಉಂಟಾಗುವ ಎತ್ತಿನ ಜಾತ್ರೆ ನೋಡಿದ್ರೆ, ಈ ಶಿಸ್ತು ಯಾವ ಮಟ್ಟಕ್ಕೆ ಅಗತ್ಯ ಎಂದು ಅರ್ಥ ಆಗುತ್ತದೆ.ವಿದ್ಯಾರ್ಥಿಗಳು, ಗುರುಗಳಿಗೆ ತೋರಿಸಿದ ಗೌರವದಿಂದ ಭಾರತದ ಇತಿಹಾಸವು ತುಂಬಿದೆ. ಚಾಣಕ್ಯ ಮತ್ತು ಚಂದ್ರಗುಪ್ತ, ದ್ರೋಣಾಚಾರ್ಯ ಮತ್ತು ಅರ್ಜುನ, ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರು. ಆದರೆ ಇಂದು ಕಾರಿಡಾರ್ಗಳಲ್ಲಿ ವಿದ್ಯಾರ್ಥಿಗಳ ಗುಂಪು ಗದ್ದಲ, ಒಬ್ಬ ಶಿಕ್ಷಕ ಹೆಜ್ಜೆ ಹಾಕಲಾರದ ಸ್ಥಿತಿಯನ್ನು ನಿರ್ಮಾಣ ಮಾಡಿದೆ. ಇದು ಕಲಿಕಾ ಪರಿಸರಕ್ಕೆ ಕೇಡು ತರುವಂತದ್ದು ಅಂದರೆ ತಪ್ಪಿಲ್ಲ ಅನಿಸುತ್ತೆ.

Oplus_131072

ಒಮ್ಮೆ ಕಲ್ಪಿಸಿಕೊಳ್ಳಿ ಹಿರಿಯ ಶಿಕ್ಷಕರು ನಿಧಾನವಾಗಿ ನಡೆದುಕೊಂಡು ಬರುತ್ತಿದ್ದಾರೆ. ಅವರ ಕೈಯಲ್ಲಿ ಪುಸ್ತಕಗಳು, ಹೆಜ್ಜೆಗಳಲ್ಲಿ ನಿಜವಾದ ಜೀವನದ ಪಾಠಗಳ ತಾಳ, ಆದರೆ ಅವರ ಎದುರು ವಿದ್ಯಾರ್ಥಿಗಳ ಸೇನೆ. ಅವರು ಹೆಜ್ಜೆ ಹಾಕಲಾರದೆ ನಿಂತಿದ್ದಾರೆ. ಇದು ಕೇವಲ ಕಲ್ಪನೆ ಮಾತ್ರವಲ್ಲ .ಇದು ನಿತ್ಯದ ಸತ್ಯ. ಗುರು ಬ್ರಹ್ಮ ಗುರು ವಿಷ್ಣು…. ಎಂಥ ಶ್ರೇಷ್ಠ ಮಾತು. ಆದರೆ ಇಂದು ಕಾರಿಡಾರ್ನಲ್ಲಿ ಗುರು ಬರಲೇಬೇಕಾದರೆ , ಮೊದಲು ವಿದ್ಯಾರ್ಥಿಗಳು ದಾರಿ ಬಿಡಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.ಆದ್ದರಿಂದ ಇಂದು ವಿದ್ಯಾರ್ಥಿಗಳಿಗೆ ಪುಸ್ತಕದ ಪಾಠ ಮಾತ್ರವಲ್ಲ ಬದುಕಿನ ಶಿಸ್ತು ಸಹ ಕಲಿಯಬೇಕು. ಎಡ ಬದಿ ಕಾರಿಡಾರ್ನಿಂದ ಬರುವವರು ಎಡ ದಿಕ್ಕಿನಿಂದ ನಡೆದು ಬಂದರೆ, ಬಲಬದಿ ಕಾರಿ ಡಾರ್ನಿಂದ ಬರುವವರು ಬಲಗಡೆ ದಿಕ್ಕಿನಿಂದ ನಡೆದು ಬಂದರೆ, ಮಧ್ಯಧಾರಿ ಸಂಪ್ರೀತ ಮೌನ ವರ್ಗವಾಗುತ್ತದೆ. ಈ ನಿಯಮ ಒಂದು ಸಣ್ಣ ಪ್ರಯತ್ನ ಆದರೆ ದೊಡ್ಡ ಬದಲಾವಣೆ ತರಬಲ್ಲದು.

ಅಲ್ಲಿ ಅನಾವಶ್ಯಕವಾಗಿ ನಿಲ್ಲುವುದು ಹಾಗೂ ಮಾತನಾಡುವುದು ನಿಷೇಧಿಸಬೇಕಿದೆ.ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರೆ ನಿಶ್ಚಿತ ದಿಕ್ಕಿನಲ್ಲಿ ನಡೆದರೆ ಏಕಾಗ್ರತೆ ,ಸಮಯದ ಲಾಭ ,ದೈಹಿಕ ಸುರಕ್ಷತೆ ಎಲ್ಲವೂ ಸುಧಾರಣೆಯಾಗುತ್ತದೆ. ಉದಾಹರಣೆಗೆ ಎಡ ಬದಿಯಿಂದ ಬಲಕ್ಕೆ ಸಾಗುವ ಗಡಿಯಾರದ ಸಮಯದಂತೆ. ನಮ್ಮ ನಡಿಗೆ ಕೂಡ ಶಿಸ್ತು ಹೊಂದುತ್ತದೆ. ವಿದ್ಯಾರ್ಥಿಗಳು ಶಾಲೆಯೊಳಗಿನ ನಡಿಗೆಗೂ ಗಂಭೀರತೆ ನೀಡಿದರೆ ಅವರ ಜೀವನದ ದಾರಿಯನ್ನು ಶಿಸ್ತು ಬದ್ಧವಾಗಿ ಸಾಗಿಸುವುದು ಖಚಿತ. ಇಂದು ಕಾರಿಡಾರ್ಗಳಲ್ಲಿ ವಿದ್ಯಾರ್ಥಿಗಳ ನಡಿಗೆ ಸರಿದಾದರೆ ಅವರ ಮುಂದಿನ ಜೀವನದ ದಾರಿಗೆ ದಿಕ್ಕು ಸಿಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ನಾವು ದೊಡ್ಡವರಾಗುತ್ತಾ ಹೋದಂತೆ ಪಾಠಗಳು ಬದಲಾಗಬಹುದು ಆದರೆ ಶಿಸ್ತು ಶಾಶ್ವತ ಅಲ್ವಾ?

ಗ್ರೀಷ್ಮ ಹೊಸೂರ್ ಕೊಪ್ಪ

Leave a Reply

Your email address will not be published. Required fields are marked *