- ಗ್ರಾಮಸ್ಥರ ಗೋಳು,ಅಧಿಕಾರಿಗಳು ಮೌನ
- ರಾತ್ರಿ ಸಮಯ ಕುಡುಕರ ಹಾಗೂ ಪ್ರೇಮಿಗಳ ಅಡ್ಡವಾಗಿದೆಯಾ?

ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ಸರ್ಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರವಿದ್ದು, ಹತ್ತಾರು ಗ್ರಾಮಗಳ ಸಾರ್ವಜನಿಕರಿಗೆ ಸೇವೆ ನೀಡಿ ತಾಲೂಕಿನ ಉತ್ತಮ ಅರೋಗ್ಯ ಕೇಂದ್ರ ಎನ್ನುವ ಹೆಮ್ಮೆ ಗಳಿಸಿತ್ತು.ಕಳೆದ ಒಂದೆರೆಡು ವರ್ಷಗಳಿಂದ ಆಡಳಿತ ವೈಖರಿಯಲ್ಲಿ ಬದಲಾವಣೆ ಕಂಡಿದ್ದು ಅರೋಗ್ಯ ಕೇಂದ್ರದಲ್ಲಿ ವೈದ್ಯಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ನಿರ್ಲಕ್ಷದಿಂದ ಸಣ್ಣ ಪುಟ್ಟ ಚಿಕಿತ್ಸೆಗೆ ಪಡೆಯಲು ತೀರ್ಥಹಳ್ಳಿ ಆಸ್ಪತ್ರೆಗೆ ಹೋಗಲು ದಾರಿ ಮಾಡಿ ಕೊಟ್ಟಿದೆ. ಅರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳೇ ಇರುವುದಿಲ್ಲ ಬೆಳಿಗ್ಗೆ 10 ಗಂಟೆಯಾದರು ಬಂದಿರುವುದಿಲ್ಲ. ಎಲ್ಲಿ ಇದ್ದಾರೆ ಎಂಬ ಮಾಹಿತಿ ಕೂಡ ತಿಳಿದಿರುವುದಿಲ್ಲ ಹಾಗೂ 4 ಗಂಟೆ ನಂತರ ಅರೋಗ್ಯ ಕೇಂದ್ರದ ಬಾಗಿಲು ಮುಚ್ಚಿರುತ್ತದೆ ಎಂಬುದು ಸಾರ್ವಜನಿಕರು ಹಾಗೂ ರೋಗಿಗಳ ಅಕ್ರೋಶಕ್ಕೆ ಕಾರಣವಾಗಿದೆ.ಆಸ್ಪತ್ರೆ ಆವರಣ ಸಂಪೂರ್ಣ ಸ್ವಚ್ಛತೆ ಮರೆತಿದ್ದು ಹಳೆಯ ಕಟ್ಟಡಗಳ ಮೇಲ್ಛಾವಣಿ ಹಾರಿ ಹೋಗಿದೆ. ಮಳೆ ನೀರು ನುಗ್ಗಿ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ ರಾತ್ರಿ ಸಮಯ ಕುಡುಕರ ಹಾಗೂ ಪ್ರೇಮಿಗಳ ಅಡ್ಡ ಆದಂತಿದೆ.ಪ್ರತಿದಿನ ಖಾಸಗಿ ವಾಹನಗಳಿಗೆ ಸ್ಥಳಾವಕಾಶ ಕೊಟ್ಟಂತಿದ್ದು, ವೈಧ್ಯಾಧಿಕಾರಿಗಳ ಕಟ್ಟಡ ಖಾಸಗಿ ಆಟೋ ಸ್ಟಾಂಡ್ ಆದಂತಿದೆ. ಈ ಎಲ್ಲಾ ಅವ್ಯವಸ್ಥೆ ನೋಡಿಯೂ ಕಂಡೂ ಕಾಣದಂತಿರುವ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ಮೌನವಾಗಿದ್ದು ವ್ಯವಸ್ಥೆಗೆ ತುರ್ತು ಪರಿಹಾರ ನೀಡಲು ಸಾರ್ವಜನಿಕರು ಸತ್ಯಶೋಧ ಮಾಧ್ಯಮದ ಮೂಲಕ ಕೇಳಿಕೊಂಡಿದ್ದಾರೆ.


