*ಪ್ರಾಣಾ ಯಥಾತ್ಮನೋಽಭೀಷ್ಟಾ*
*ಭೂತಾನಾಮಪಿ ತೇ ತಥಾ ।*
*ಆತ್ಮೌಪಮ್ಯೇನ ಭೂತೇಷು*
*ದಯಾಂ ಕುರ್ವಂತಿ ಸಾಧವಃ ॥*
(ಹಿತೋಪದೇಶ

“ತನಗೆ ಹೇಗೆ ತನ್ನ ಪ್ರಾಣದ ಮೇಲೆ ಅಪರಿಮಿತ ಆಸೆ ಇದೆಯೋ ಹಾಗೆಯೇ ಇತರ ಪ್ರಾಣಿ-ಪಕ್ಷಿಗಳಿಗೂ ಕೂಡಾ. ಆದುದರಿಂದ ಸಜ್ಜನರು ಎಲ್ಲ ಪ್ರಾಣಿಗಳೂ ತಮ್ಮಂತೆಯೇ ಎಂದೆಣಿಸಿ ಎಲ್ಲ ಪ್ರಾಣಿಗಳ ಬಗೆಗೆ ದಯೆಯಿಂದ ವರ್ತಿಸುತ್ತಾರೆ.”ಹಲವು ಪ್ರಾಣಿಗಳ ಪ್ರಯೋಜಕತೆಯಿಂದಲೋ ಅವನ್ನು ಸಾಕಿಕೊಂಡಿರುವ ಕಾರಣದಿಂದಲೋ ಅವು ಆಕರ್ಷಕಗಳೆಂದೋ ಅವುಗಳ ಬಗೆಗೆ ಜನರು ಮಮತೆ ತಳೆಯುವುದುಂಟು. ಇದಕ್ಕಿಂತ ಉನ್ನತವಾದುದೆಂದರೆ ನಮ್ಮನ್ನು ಸೃಷ್ಟಿಸಿದ ಭಗವಂತನೇ ಪ್ರಾಣಿ-ಪಕ್ಷಿಗಳನ್ನೂ ಸೃಷ್ಟಿಸಿದ್ದಾನೆ, ನಮ್ಮಂತೆ ಅವೂ ಜೀವಜಗತ್ತಿನ ಭಾಗಗಳೇ ಆದುದರಿಂದ ಪ್ರೀತಿಗೆ ಅರ್ಹವಾದವು – ಎಂಬ ಅರಿವು. _“ಕೋ ಧರ್ಮೋ ಭೂತದಯಾ….”_ ಧರ್ಮಾಚರಣೆಯ ಶ್ರೇಷ್ಠರೂಪವೆಂದರೆ ಪ್ರಾಣಿದಯೆ – ಮೊದಲಾದ ಪ್ರಸಿದ್ಧೋಕ್ತಿಗಳು ಅನೇಕ ಇವೆ. ಪ್ರಾಣಿಗಳಲ್ಲಿಯೂ ಪಕ್ಷಿಗಳಲ್ಲಿಯೂ ದಯೆಯಿಂದ ವರ್ತಿಸುವುದು ಸುಸಂಸ್ಕೃತಿಯ ಲಕ್ಷಣ.ಭಗವಾನ್ ರಮಣಮಹರ್ಷಿಗಳು ಪ್ರಾಣಿ-ಪಕ್ಷಿಗಳ ಬಗೆಗೆ ಎಷ್ಟು ತಾದಾತ್ಮ್ಯ ತಳೆದಿದ್ದರೆಂಬುದು ಜನಜನಿತವಾಗಿದೆ. ಯಾವುದೋ ಆತಂಕಕ್ಕೀಡಾದ ಪ್ರಾಣಿಗಳು ಸಮಾಧಾನಕ್ಕಾಗಿ ಅವರ ಬಳಿ ಸಾರುತ್ತಿದ್ದುದು ಅಪರೂಪವಲ್ಲ.ಒಮ್ಮೆ ಒಬ್ಬ ಮನೆಯೊಡತಿ ಏನೋ ಕಾರಣಕ್ಕೆ ನಾಯಿಯನ್ನು ಕೂಡಿಹಾಕಿ ದಂಡಿಸಿದ್ದಳು. ವಿಮೋಚನೆಗೊಂಡೊಡನೆ ಅದು ಧಾವಿಸಿದುದು ಭಗವಾನ್ ರಮಣರ ಬಳಿಗೆ, ರಮಣರು ಅದಕ್ಕೆ ಆಹಾರ ನೀಡಿ ಸಾಂತ್ವನಪಡಿಸಿದರು. ಮೂರುನಾಲ್ಕು ದಿನಗಳಾದರೂ ನಾಯಿ ತನ್ನ ಮಾಲಿಕಳ ಮನೆಗೆ ಹೋಗಲು ನಿರಾಕರಿಸಿತು. ರಮಣರು ಆಕೆಗೆ ಹೇಳಿಕಳಿಸಿ ಆಗಿದ್ದುದೇನೆಂದು ವಿಚಾರಿಸಿದರು. ಆಕೆ ತಾನು ಒರಟಾಗಿ ನಡೆದುಕೊಂಡಿದ್ದುದನ್ನು ಒಪ್ಪಿಕೊಂಡಳು. ರಮಣರು ನಾಯಿಯ ಮೈಸವರಿ ಓಲೈಸಿದ ಮೇಲೆ ಅದು ಮಾಲಿಕಳೊಡನೆ ಮನೆಗೆ ಹಿಂದಿರುಗಿತು.ಒಂದು ತುಂಟ ಅಳಿಲು ಭಗವಾನರಲ್ಲಿ ತುಂಬಾ ಸಲಿಗೆಯಿಂದ ಇದ್ದಿತು. ಅದು ಭಗವಾನರು ಕೈಯಿಂದ ತಿನ್ನಿಸಿದಾಗ ಮಾತ್ರ ತಿನ್ನುತ್ತಿತ್ತು. ಒಮ್ಮೆ ಗ್ರಂಥದಲ್ಲಿ ಮಗ್ನರಾಗಿದ್ದ ಭಗವಾನರು ಅಳಿಲು ಬಂದಿದ್ದುದನ್ನು ಗಮನಿಸಲಿಲ್ಲ. ಒಂದಷ್ಟು ಸಮಯವಾದ ಮೇಲೆ ಅಳಿಲು ಮುನಿದು ಭಗವಾನರ ಬೆರಳನ್ನು ಕಚ್ಚಿಬಿಟ್ಟಿತು. ಭಗವಾನರು ಅದನ್ನು ಕಳಿಸಿಯಾದ ಮೇಲೆ ಎರಡು-ಮೂರು ದಿವಸ ಅದನ್ನು ಮಾತನಾಡಿಸಲಿಲ್ಲ. ಅದು ಬಂದು ಪಶ್ಚಾತ್ತಾಪದಿಂದೆಂಬಂತೆ ಮೌನವಾಗಿ ಕುಳಿತಿರುತ್ತಿತ್ತು. ಬೇರೆಯವರು ನೀಡಿದ ಕಾಳುಗಳನ್ನು ಮುಟ್ಟಲಿಲ್ಲ. ಕಡೆಗೆ ಭಗವಾನರೇ ಸೋಲಬೇಕಾಯಿತು. ಆ ಅಳಿಲು ಭಗವಾನರ ಮೈಯ ಮೇಲೆಲ್ಲ ಓಡಾಡಿ ಪ್ರೀತಿಯನ್ನು ವ್ಯಕ್ತಪಡಿಸುತ್ತಿತ್ತು.ಒಬ್ಬ ದಂಪತಿಗಳು ಭಗವಾನರ ದರ್ಶನಕ್ಕೆ ಬಂದಾಗಲೆಲ್ಲ ಅವರ ನಾಯಿಯೂ ಬಂದು ದೂರದಲ್ಲಿ ಕುಳಿತಿರುತ್ತಿತ್ತು. ಒಮ್ಮೆ ಆ ದಂಪತಿಗಳು ಕಾರ್ಯನಿಮಿತ್ತ ಬೇರೆ ಊರಿಗೆ ಹೋದರು; ಹಿಂದಿರುಗುವುದು ನಿರೀಕ್ಷೆಗಿಂತ ವಿಳಂಬವಾಯಿತು. ಮೂರು-ನಾಲ್ಕು ದಿನಗಳಾದ ಮೇಲೆ ನಾಯಿಯು ಭಗವಾನ್ ರಮಣರಲ್ಲಿಗೆ ಧಾವಿಸಿ ಬಂದಿತು. ಅಲ್ಲಿದ್ದವರು ಅದನ್ನು ಹೊರಕ್ಕೆ ಕಳುಹಿಸಿದರು. ನಾಯಿಯು ಹೊರಗೇ ಕುಳಿತಿದ್ದು ಎಲ್ಲರೂ ನಿರ್ಗಮಿಸಿದ ಮೇಲೆ ಮತ್ತೆ ಭಗವಾನರಲ್ಲಿಗೆ ಬಂದು ಜೋಲುಮೋರೆ ಹಾಕಿ ಕುಳಿತಿತು. ಅದಕ್ಕೆ ಏನೋ ಆತಂಕ ಒದಗಿದೆಯೆಂದು ರಮಣರಿಗೆ ಅರಿವಾಯಿತು. ಅವರು ನಾಯಿಯ ಮೈಯನ್ನು ಸವರಿ ಸಾಂತ್ವನದ ಮಾತುಗಳನ್ನು ಆಡಿದರು. ನಾಯಿಯು ಸಮಾಧಾನಗೊಂಡು ಮನೆಗೆ ಹಿಂದಿರುಗಿತು.ಇಂತಹ ಪ್ರಸಂಗಗಳು ಆಗಿಂದಾಗ ನಡೆಯುತ್ತಿದ್ದವು.ಜಗತ್ತಿನ ಎಲ್ಲ ಸಂಪ್ರದಾಯಗಳ ಬೋಧಕರೂ ಪ್ರಾಣಿದಯೆಯನ್ನು ಕರ್ತವ್ಯವೆಂದು ವಿಧಿಸಿದ್ದಾರೆ. ಕೊಲ್ಲುವ ಮಾತು ಹಾಗಿರಲಿ; ಪ್ರಾಣಿಗಳನ್ನು ಮೋಜಿಗಾಗಿ ಬಳಸುವುದೂ ನಿಂದ್ಯವೆಂದು ಜರತುಷ್ಟ್ರ ಗಾಥೆಗಳ ಉಪದೇಶವಿದೆ.(ಉತ್ಥಾನ – 2013)*🌷🌺🙏ಶುಭದಿನವಾಗಲಿ!🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

Leave a Reply

Your email address will not be published. Required fields are marked *