
ಭಾರತದ ಸಾಂವಿಧಾನಿಕ ಸಾರ್ವಭೌಮತ್ವದ ಸಂಕೇತವಾದ ಗಣರಾಜ್ಯೋತ್ಸವವನ್ನು ಆರಗ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಗ್ರಾಮದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸಮರಸದ ಪಥಸಂಚಲನ ನಡೆಸಿದರು. ದೇಶಭಕ್ತಿಯ ಉತ್ತುಂಗದ ಘೋಷಣೆಗಳನ್ನು ಮೊಳಗಿಸುತ್ತಾ, ತಾಯಿ ಭಾರತಿಯ ಹೆಮ್ಮೆಯನ್ನು ಸಾರುವ ಘೋಷಣೆಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಸಂಚರಿಸಿದ ವಿದ್ಯಾರ್ಥಿ ವೃಂದವು ಅಂತಿಮವಾಗಿ ಪಂಚಾಯಿತಿ ಆವರಣಕ್ಕೆ ತಲುಪಿತು.ಪಂಚಾಯಿತಿಯ ಆವರಣದಲ್ಲಿ ನಡೆದ ಔಪಚಾರಿಕ ಧ್ವಜಾರೋಹಣ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಯುತ ನೆಲ್ಲಿಗದ್ದೆ ಚಂದ್ರಶೇಖರ್ ಅವರು ನೆರವೇರಿಸಿದರು.

ಧ್ವಜಾರೋಹಣದ ನಂತರ ಮಾತನಾಡಿದ ಅವರು, ಸಂವಿಧಾನವು ನಮಗೆ ನೀಡಿರುವ ಹಕ್ಕು ಮತ್ತು ಕರ್ತವ್ಯಗಳ ಸಮತೋಲನದ ಕುರಿತು ಪ್ರೇರಣಾದಾಯಕ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಪಂಚಾಯಿತಿಯ ಉಪಾಧ್ಯಕ್ಷರಾದ ಶ್ರೀಮತಿ ರೇವತಿ ಗಣೇಶ್ ಹಾಗೂ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು. ಸಮಾರಂಭದ ಪರೇಡ್ ಕಮಾಂಡರ್ ಕರ್ತವ್ಯವನ್ನು ಪ್ರೌಢಶಾಲಾ ವಿಭಾಗದ 8 ನೇ ತರಗತಿ ವಿದ್ಯಾರ್ಥಿ ಕುಮಾರ ಕೌಶಿಕ್ ಅತ್ಯಂತ ದಕ್ಷತೆಯಿಂದ ನಿರ್ವಹಿಸಿ, ಕಾರ್ಯಕ್ರಮದ ಗಾಂಭೀರ್ಯವನ್ನು ಹೆಚ್ಚಿಸಿದನು.ಸಮಾರಂಭದಲ್ಲಿ ಗ್ರಾಮ ಪಂಚಾಯಿತಿಯ ಗೌರವಾನ್ವಿತ ಸದಸ್ಯರುಗಳಾದ ಶ್ರೀ ಅಗಳಬಾಗಿಲು ಮಹೇಶ್, ಶ್ರೀಮತಿ ಪ್ರೇಮ, ಶ್ರೀ ರಮೇಶ್, ಶ್ರೀ ಶಂಕರಪ್ಪ ಕೆ. ಆರ್ , ಶ್ರೀಮತಿ ಸುಜಾತ ಸುರೇಶ್, ಶ್ರೀಮತಿ ಸುಮಿತ್ರ ಹರೀಶ್ ಹಾಗೂ ಶ್ರೀಮತಿ ಸುಮಿತ್ರ ದೇವೇಂದ್ರ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಅಲ್ಲದೆ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಮಾನ್ಯ ವೈದ್ಯಾಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿಯವರು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಶಿಕ್ಷಕರು ಹಾಗೂ ಸಿಬ್ಬಂದಿಯವರು, ಕಾಲೇಜು ಅಭಿವೃದ್ಧಿ ಸಮಿತಿಯ, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಎಸ್.ಡಿ.ಎಂ. ಸಿ ಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಉಪಸ್ಥಿತಿಯು ಕಾರ್ಯಕ್ರಮದ ಸಾಮಾಜಿಕ ವ್ಯಾಪ್ತಿಯನ್ನು ಪ್ರತಿಬಿಂಬಿಸಿತು.ಕಾರ್ಯಕ್ರಮದ ಸಾಂಸ್ಕೃತಿಕ ವಿಭಾಗವು ವಿದ್ಯಾರ್ಥಿಗಳ ಪ್ರತಿಭೆಗೆ ಸಾಕ್ಷಿಯಾಯಿತು. ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರಸ್ತುತಪಡಿಸಿದ ರಾಷ್ಟ್ರಭಕ್ತಿ ಗೀತೆಯ ಗಾಯನ ಮತ್ತು ನೃತ್ಯಗಳು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟ ಹಾಗೂ ಗಣತಂತ್ರ ನಡೆದು ಬಂದ ದಾರಿಯನ್ನು ನೆನಪಿಸಿದವು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಶಿಸ್ತುಬದ್ಧ ಡಂಬಲ್ಸ್ ಕಸರತ್ತು ಹಾಗೂ ಲೇಝಿಮ್ಸ್ ನೃತ್ಯವು ಕ್ರೀಡಾ ಸ್ಫೂರ್ತಿ ಮತ್ತು ಸಾಂಸ್ಕೃತಿಕ ಸೊಗಡಿನ ಸಮ್ಮಿಲನದಂತಿದ್ದವು. ಗ್ರಾ. ಪಂ. ಸಿಬ್ಬಂದಿಯಾದ ಶ್ರೀ ವೆಂಕಟೇಶ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಇದೇ ಸಂಧರ್ಭದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಕಾರ್ಮಿಕರ ಹಿತ ರಕ್ಷಣಾ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಮಂಜುನಾಥ ಡಿ ಗೌಡರವರು ಸ್ವಪ್ರೇರಣೆಯಿಂದ ಪ್ರೌಢಶಾಲಾ ವಿಭಾಗದ ಮೂರೂ ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಲಾ ಮೂರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾದ ಬಹುಮಾನವನ್ನು ನೀಡಿದರು. ಅವರ ಈ ನಡೆ ನಿಜಕ್ಕೂ ವಿದ್ಯಾರ್ಥಿಗಳಿಗೆ ಪ್ರೇರಣದಾಯಿ. ನಂತರ ಪ್ರೌಢಶಾಲಾ ವಿಭಾಗದ ವತಿಯಿಂದ ಶ್ರೀಯುತರನ್ನು ಸನ್ಮಾನಿಸಲಾಯಿತು. ಗ್ರಾಮದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನಾಗರಿಕರ ಸಮ್ಮುಖದಲ್ಲಿ ನಡೆದ ಈ ಆಚರಣೆಯು ಪ್ರಜಾಪ್ರಭುತ್ವದ ಹಬ್ಬದಂತೆ ಕಂಗೊಳಿಸಿತು.
