
ಸಕ್ರೆಬೈಲು: ಸಕ್ರೆಬೈಲು ಆನೆ ಶಿಬಿರ ಆನೆಗಳಲ್ಲಿ ಒಂದಾದ ಬಾಲಣ್ಣ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಬಲಗಿವಿಯಲ್ಲಿ ಉಂಟಾಗಿದ್ದ ಗ್ಯಾಂಗ್ರಿನ್ ಸೋಂಕಿನಿಂದಾಗಿ ಆನೆಯ ಬಲ ಕಿವಿಯ ಭಾಗವನ್ನು ವೈದ್ಯರ ತಂಡವು ಕತ್ತರಿಸಿ ತೆಗೆದಿದೆ.

ತೀವ್ರವಾಗಿ ಸೋಂಕಿಗೆ ಒಳಗಾಗಿದ್ದ ಬಾಲಣ್ಣ ಆನೆಯ ಬಲಗಿವಿ ಸಂಪೂರ್ಣವಾಗಿ ಕಪ್ಪಾಗಿ, ಕೀವು ಸೋರುತ್ತಿತ್ತು. ಈ ಹಿನ್ನೆಲೆ ಆನೆಗೆ ತುರ್ತು ಚಿಕಿತ್ಸೆ ನೀಡಲು ಶನಿವಾರ ಸಂಜೆ ಬೆಂಗಳೂರಿನಿಂದ ವಿಶೇಷ ವೈದ್ಯರ ತಂಡವು ಸಕ್ರೆಬೈಲು ಶಿಬಿರಕ್ಕೆ ಆಗಮಿಸಿತ್ತು.ತಜ್ಞ ವೈದ್ಯರಾದ ಡಾ. ಚೆಟ್ಟು ಯಪ್ಪ, ಡಾ. ರಮೇಶ್ ಸೇರಿದಂತೆ ಒಟ್ಟು ಐದು ಜನರ ವೈದ್ಯರ ತಂಡವು ಆನೆಯ ಆರೋಗ್ಯವನ್ನು ಪರಿಶೀಲಿಸಿ ತಕ್ಷಣವೇ ಚಿಕಿತ್ಸೆಯನ್ನು ಆರಂಭಿಸಿತ್ತು. ಸೋಂಕು ತೀವ್ರವಾಗಿದ್ದರಿಂದ ಮತ್ತು ಗ್ಯಾಂಗ್ರಿನ್ ದೇಹದ ಇತರ ಭಾಗಗಳಿಗೆ ಹರಡುವುದನ್ನು ತಡೆಯಲು, ವೈದ್ಯಕೀಯ ತಂಡವು ಆನೆಯ ಬಲ ಕಿವಿಯನ್ನು ಕತ್ತರಿಸಿದೆ.


