
ಹೇಳೋರು ಇಲ್ಲ, ಕೇಳೋರು ಇಲ್ಲ – 7ವರ್ಷದ ಒಳಗಿನ ಪ್ರಕರಣಗಳಿಗೆ ಶಿಕ್ಷೆಯಾಗದಿರುವುದು ವರದಾನವಾಯ್ತಾ?

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿ ವ್ಯಾಪ್ತಿಯ ಆಂದಿನಿ ಕ್ವಾರೆಯಲ್ಲಿ ಅಕ್ರಮ ಮರಳು ಮಾಫಿಯ ನಡೆಯುತ್ತಿದ್ದು ಇದೀಗ ವಿಡಿಯೋ ವೈರಲ್ ಆದ ಹಿನ್ನಲೆ ಆಗುಂಬೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕ್ವಾರೆಗೆ ಟ್ರಂಚ್ ಹೊಡೆಸಿದ್ದಾರೆ.ಇನ್ನು ರಾಹುಲ್ ಎಂಬಾತನ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಈ ಘಟನೆಯಲ್ಲಿ ಬಳಸಲಾದ ಮರಳು ತುಂಬಿದ 6 ಪಿಕಪ್, 11ಸಾವಿರ ದಂಡ, 1 ಟ್ರಾಕ್ಟಾರ್, ಜೊತೆಗೆ 4 ಸಾವಿರ ದಂಡ, ಇದರೊಂದಿಗೆ 1 ಲಾರಿ 10ಸಾವಿರ ದಂಡ ಹಾಕಿ ಪ್ರಕರಣ ದಾಖಲಿಸಲಾಗಿದೆ.

ಮರಳು ಕ್ವಾರೆಗಳು ಹರಾಜು ಆಗದ ಕಾರಣ ಈ ರೀತಿ ಅಕ್ರಮ ಮರಳು ಹಾಗೂ ಕಲ್ಲು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದ್ದು ಕುಶಾವತಿ ಹಳ್ಳ,ಶಿರುಪತಿ, ನರಟೂರು, ದಬ್ಬಣಗದ್ದೆ, ಆರಗ, ಹುಣಸವಳ್ಳಿ, ಪೀರನಗುಡ್ಡೆ, ಹಿರೇಸರ, ಆಂದಿನಿ, ಬಗ್ಗುಡುಗೆ ಸಮೀಪ ಅಕ್ಕಪಕ್ಕದಲ್ಲಿ ,ಅರೇಹಳ್ಳಿ, ಹೆದ್ದೂರು, ನಾಬಳ ಭಾಗದಲ್ಲಿ ನಿರಂತರವಾಗಿ ಪಿಕಪ್ ಗಳಲ್ಲಿ ಹಗಲು ರಾತ್ರಿ ಎನ್ನದೆ ವಾಹನಗಳು ಹಳ್ಳ ಮತ್ತು ನದಿ ಗಳಿಂದ ಜೆಸಿಬಿ ಯಂತ್ರಗಳಿಂದ ಮರಳನ್ನು ತೆಗೆಯುತ್ತಿದ್ದು. ಪ್ರತಿ ದಿನ ಲಕ್ಷಾಂತರ ವಹಿವಾಟು ನಡೆಯುತ್ತದೆ. ಇದಕ್ಕೆಲ್ಲ ಕಡಿವಾಣ ಯಾವಾಗ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.ಇನ್ನು ಇಷ್ಟೆಲ್ಲ ನಡೆದರು ಸಂಬಂಧ ಪಟ್ಟ ಅಧಿಕಾರಿಗಳು ಇನ್ಮುಂದೆಯಾದರು ಕ್ರಮ ಕೈಗೊಳ್ಳಬೇಕಿದೆ.ಜೊತೆಗೆ ಸರ್ಕಾರ ಕೂಡ ಈ ಬಗ್ಗೆ ಗಮನ ಹರಿಸಬೇಕಿದೆ.

